ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ, ಗೋಳ್ತಮಜಲು, ದಕ್ಷಿಣ ಕನ್ನಡ - 574222, ದಕ್ಷಿಣ ಕನ್ನಡ .
Sri Nitilaksha Sadashiva Temple, Golthamajalu, Dakshina Kannada - 574222, Dakshina Kannada District [TM000118]
×
Temple History
ಇತಿಹಾಸ
ಶ್ರೀ ನಿಟಿಲಾಕ್ಷ ಸದಾಶಿವ ದೇವರು ನೆಲೆನಿಂತ ಕ್ಷೇತ್ರ ನಿಟಿಲಾಪುರ. ಇದು ತುಳುನಾಡಿನ ಕೇಂದ್ರ ಭಾಗದಲ್ಲಿರುವ ಒಂದು ಕಾರ್ಣಿಕ ಕ್ಷೇತ್ರ. ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲಿ (ರಾ.ಹೆ.75) ಮಂಗಳೂರಿನಿಂದ 30ಕಿ.ಮೀ. ದೂರದಲ್ಲಿ ಕಲ್ಲಡ್ಕ ಇದೆ ಅಲ್ಲಿಂದ ಸುಮಾರು 2ಕಿ.ಮೀ. ಪಶ್ಚಿಮದಲ್ಲಿ ನಿಟಿಲಾಪುರ (ನೆಟ್ಲ ) ಕ್ಷೇತ್ರವಿದೆ. ಕಲ್ಲಡ್ಕ ವಿಟ್ಲ ರಸ್ತೆಯಲ್ಲಿ ರೈಲ್ವೆ ಮೇಲು ಸಂಕಕ್ಕೆ ಮೊದಲು ಬಲಕ್ಕೆ ಕವಲೊಡೆಯುವ ಮಂಚಿ ರಸ್ತೆಯಿಂದ ಶ್ರೀ ಕ್ಷೇತ್ರ ನಿಟಿಲಾಪುರಕ್ಕೆ ರಸ್ತೆ ಸಂಪರ್ಕ ಇದೆ. ಪ್ರಕೃತಿ ರಮಣೀಯವಾದ ಬಯಲ ನಡುವೆ ಶ್ರೀ ನಿಟಿಲಾಕ್ಷ ದೇವಸ್ಥಾನ ಕಂಗೊಳಿಸುತ್ತಿದೆ.
ಪೌರಾಣಿಕ ಹಿನ್ನೆಲೆ : ಪ್ರಳಯ ಕಾಲದಲ್ಲಿ ಏಳಮಶಿವನು ಬಾಲಶಿವನಾಗಿಯೂ ಉಮೇಯು ಕುಮಾರಿ ಗೌರಿಯಾಗಿಯು ಜಲಕ್ರೀಡೆಯಾಡುತ್ತಾ ದೋಣಿಯೊಂದರಲ್ಲಿ ದೊಡ್ಡದಾದ ಬಂಡೆಯೊಂದರ ಸಮೀಪ ತಂಗುತ್ತಾರೆ. ಮಕ್ಕಳಂತೆ ಕಣ್ಣುಮುಚ್ಚಾಲೆ ಆಟ ಆಡುವ ಸಮಯ ಸದಾಶಿವನ ಎರಡೂ ಕಣ್ಣುಗಳನ್ನು...ಶ್ರೀ ನಿಟಿಲಾಕ್ಷ ಸದಾಶಿವ ದೇವರು ನೆಲೆನಿಂತ ಕ್ಷೇತ್ರ ನಿಟಿಲಾಪುರ. ಇದು ತುಳುನಾಡಿನ ಕೇಂದ್ರ ಭಾಗದಲ್ಲಿರುವ ಒಂದು ಕಾರ್ಣಿಕ ಕ್ಷೇತ್ರ. ಮಂಗಳೂರು - ಬೆಂಗಳೂರು ಹೆದ್ದಾರಿಯಲ್ಲಿ (ರಾ.ಹೆ.75) ಮಂಗಳೂರಿನಿಂದ 30ಕಿ.ಮೀ. ದೂರದಲ್ಲಿ ಕಲ್ಲಡ್ಕ ಇದೆ ಅಲ್ಲಿಂದ ಸುಮಾರು 2ಕಿ.ಮೀ. ಪಶ್ಚಿಮದಲ್ಲಿ ನಿಟಿಲಾಪುರ (ನೆಟ್ಲ ) ಕ್ಷೇತ್ರವಿದೆ. ಕಲ್ಲಡ್ಕ ವಿಟ್ಲ ರಸ್ತೆಯಲ್ಲಿ ರೈಲ್ವೆ ಮೇಲು ಸಂಕಕ್ಕೆ ಮೊದಲು ಬಲಕ್ಕೆ ಕವಲೊಡೆಯುವ ಮಂಚಿ ರಸ್ತೆಯಿಂದ ಶ್ರೀ ಕ್ಷೇತ್ರ ನಿಟಿಲಾಪುರಕ್ಕೆ ರಸ್ತೆ ಸಂಪರ್ಕ ಇದೆ. ಪ್ರಕೃತಿ ರಮಣೀಯವಾದ ಬಯಲ ನಡುವೆ ಶ್ರೀ ನಿಟಿಲಾಕ್ಷ ದೇವಸ್ಥಾನ ಕಂಗೊಳಿಸುತ್ತಿದೆ.
ಪೌರಾಣಿಕ ಹಿನ್ನೆಲೆ : ಪ್ರಳಯ ಕಾಲದಲ್ಲಿ ಏಳಮಶಿವನು ಬಾಲಶಿವನಾಗಿಯೂ ಉಮೇಯು ಕುಮಾರಿ ಗೌರಿಯಾಗಿಯು ಜಲಕ್ರೀಡೆಯಾಡುತ್ತಾ ದೋಣಿಯೊಂದರಲ್ಲಿ ದೊಡ್ಡದಾದ ಬಂಡೆಯೊಂದರ ಸಮೀಪ ತಂಗುತ್ತಾರೆ. ಮಕ್ಕಳಂತೆ ಕಣ್ಣುಮುಚ್ಚಾಲೆ ಆಟ ಆಡುವ ಸಮಯ ಸದಾಶಿವನ ಎರಡೂ ಕಣ್ಣುಗಳನ್ನು ಕುಮಾರಿಯು ಮುಚ್ಚಿ ಹಿಡಿಯುತ್ತಾಳೆ. ಪ್ರಪಂಚಕ್ಕೆ ಕತ್ತಲು ಆವರಿಸುವ ಸಂದರ್ಭದಲ್ಲಿ ಶಿವನು ಮೂರನೇ ಕಣ್ಣಿನ ಮೂಲಕ ಬೆಳಕನ್ನು ನೀಡುತ್ತಾನೆ. ನಿಟಲಾಕ್ಷ ಎಂದರೆ ‘ಹಣೆಗಣ್ಣ’ ಎಂದು, ಈ ನಿಟಿಲಾಕ್ಷ ಸದಾಶಿವನು ನೆಲೆ ನಿಂತ ಊರು ‘ನಿಟಿಲಾಪುರ’ ಎಂದು ಪ್ರಸಿದ್ಧಿ ಪಡೆಯಿತು.
ನಿಟಿಲಾಪುರದ ದಕ್ಷಿಣಕ್ಕಿರುವ ಬೆಟ್ಟದ ಮೇಲಿನ ದೊಡ್ಡದಾದ ಬಂಡೆಯ ಬಿತ್ತಪಾಡಿಪಾದೆ (ಬೀಜಹಾಕಿದ ಬಂಡೆ) ಪಿಲಿಂಜ ಎಂಬಲ್ಲಿನ ಏತದ ಗುಂಡಿ ಹಾಗೂ ಬಯಲ ನಡುವಿನ ದೇವೆರೆಮಾರು (ದೇವರಗದ್ದೆ)ಗಳಲ್ಲಿ ಸದಾಶಿವನು ಲಿಂಗರೂಪದಲ್ಲಿ ಆವಿರ್ಭವಿಸಿದಾಗ- ಎಲ್ಲರಿಗೂ ಅನುಕೂಲವಾದ ಸ್ಥಳದಲ್ಲಿ ಉದ್ಭವಿಸುವಂತೆ ಊರವರೆಲ್ಲ ಪ್ರಾರ್ಥಿಸಿದರು.
ಭಕ್ತರ ಪ್ರಾರ್ಥನೆಯನ್ನು ಮನ್ನಿಸಿ ಪರಮಶಿವನು ಸದಾಶಿವನಾಗಿ ಬಯಲು ಪ್ರದೇಶದಲ್ಲಿ ಮುಂಡೇವಿನ (ಕೇದಗೆ ಜಾತಿಯ ಸಸ್ಯ) ಪೊದೆಗಳ ಮಧ್ಯೆ ಮೈದೋರಿದ ಊರಿನ ಪ್ರಮುಖರಿಗೆ ಈ ಕುರಿತು ಸ್ವಪ್ನ ದೃಷ್ಟಾಂತವಾಯಿತು. ಬಳಿಕ ಎಲ್ಲರೂ ಒಂದಾಗಿ ಪರಮಶಿವನಿಗೆ ಶಿವಾಲಯವನ್ನು ಕಟ್ಟಿದರು.
ಚಾರಿತ್ರಿಕ ಹಿನ್ನೆಲೆ : ವಿಟ್ಲ ಸಮೀಪ ಮಂಗಳಪದವಿನ ಒಕ್ಕೆತ್ತೂರು ನದಿಯಿಂದ ಉತ್ತರಕ್ಕೆ, ನೇತ್ರಾವತಿಯ ಉಪನದಿ ಅಮೈ ನದಿಯಿಂದ ಪಶ್ಚಿಮಕ್ಕೆ ನಡುಸಜೀಪದ ಅಮಟಾಡಿ ಎಂಬಲ್ಲಿಂದ ಪೂರ್ವಕ್ಕೆ ನೇತ್ರಾವತಿ ನದಿಯಿಂದ ದಕ್ಷಿಣಕ್ಕೆ ಚಾಚಿಕೊಂಡಿರುವ ಭೂ ಪ್ರದೇಶವೇ ಮೊಗರನಾಡು ಸೀಮೆ ಪ್ರಾಚೀನ ತುಳುನಾಡಿನ ಆಳುವ ದೊರೆಗಳ ಸಾಮ್ರಾಜ್ಯಕ್ಕೆ ಈ ಪ್ರದೇಶ ಸೇರಿತ್ತು. ಈ ಕುರಿತು ಐತಿಹಾಸಿಕ ದಾಖಲೆಗಳು ಹೇಳುತ್ತವೆ.
ಈ ಸೀಮೆಯ 9 ಮಾಗಣೆ ,28 ಗುತ್ತು,24 ಗ್ರಾಮಗಳು, ನಿಟಿಲಾಪುರದ 14 ವರ್ಗಗಳ ಜನರು ಸೀಮೆಯ ಈ ದೇವಸ್ಥಾನದ ವಿವಿಧ ಕೈಂಕರ್ಯ ನಡೆಸುವ ಕ್ರಮವಿದೆ. ಈ ಮೊಗರನಾಡು ಸೀಮೆಯೊಳಗೆ 11 ಶಿವಾಲಯಗಳು, 9 ದೇವಿ ದೇವಸ್ಥಾನಗಳು, 6 ಸುಬ್ರಹ್ಮಣ್ಯ ದೇವರ ಸನ್ನಿಧಿ, 4 ಲಕ್ಷ್ಮೀನರಸಿಂಹ ಸನ್ನಿಧಿ, ಶ್ರೀ ವೆಂಕಟರಮಣ ದೇವರ 4 ಸಾನಿಧ್ಯಗಳು ಮತ್ತು ಶ್ರೀವಿಷ್ಣುಮೂರ್ತಿ ದೇವರ ಸಾನಿಧ್ಯಗಳು ವಿಶೇಷವಾಗಿ ಇವೆ. ಕಡೇಶಿವಾಲಯದ ಶ್ರೀ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನ ಮತ್ತು ಶ್ರೀ ಕ್ಷೇತ್ರ ನಿಟಿಲಾಪುರದ ಶ್ರೀ ನಿಟಿಲಾಕ್ಷ ಸದಾಶಿವ ದೇವರು ಸೀಮೆಯ ದೇವರೆಂದು ಪ್ರಸಿದ್ಧಿ ಇದೆ.
ಶ್ರೀ ದೇವಸ್ಥಾನ ನಿಟಿಲಾಪುರದಲ್ಲಿ ದುರ್ಗಾಲಯ, ಪಿಲಿಚಾಮುಂಡಿ ಮತ್ತು ಪಂಜುರ್ಲಿ, ಧರ್ಮದೇವತೆಯಾದ ಧೂಮಾವತಿ ಬಂಟ ದೈವಗಳು ಶ್ರೀ ದೇವರ ಪರಿವಾರ ದೈವಗಳಾಗಿ ಮೆರೆಯುತ್ತಿವೆ. ಶ್ರೀ ನಿಟಿಲಾಕ್ಷ ಸದಾಶಿವ ದೇವರ ಜೊತೆಯಲ್ಲಿ ಶ್ರೀ ಸಿದ್ಧಿವಿನಾಯಕ ಧರ್ಮಶಾಸ್ತರ ಮತ್ತು ಕುಮಾರಿ ದುರ್ಗಾಂಬಾ ದೇವರುಗಳ ಸಾನಿಧ್ಯಗಳೂ ಇವೆ. ಸೀಮೆಯ ದೈವಗಳಾದ ಕಾಂಪ್ರಬೈಲು ಉಳ್ಳಾಲ್ತಿ ಮತ್ತು ಅಜ್ವೇರ ಧರ್ಮದೈವಗಳು ಶ್ರೀ ಕ್ಷೇತ್ರ ನಿಟಿಲಾಪುರದ ನಿಕಟ ಸಂಬಂಧ ಹೊಂದಿದ್ದು (ಚಾರಿತ್ರಿಕ ಹಿನ್ನೆಲೆ ಹೊದಿದ್ದು) ಶ್ರೀ ದೇವರ ಭೇಟಿ ಕಾರ್ಯಗಳು ಇವೆ.
ಕಾರ್ತೀಕ ಮಾಸದ 2 ನೇ ಸೋಮವಾರದ ಮೊದಲ ಶನಿವಾರ ಲಕ್ಷದೀಪೋತ್ಸವ ಹಾಗೂ ಪೇಟೆ ಸವಾರಿ ಉತ್ಸವಗಳು ಜರಗುತ್ತವೆ. ಮೀನ ಸಂಕ್ರಮಣದಂದು ಧ್ವಜಾರೋಹಣವಾಗಿ 5 ದಿನಗಳ ವಾರ್ಷಿಕ ಜಾತ್ರೆ ಜರಗುತ್ತವೆ. 4ನೇ ದಿನ ವಿಶೇಷವಾಗಿ ರಥೋತ್ಸವ 5ನೇ ದಿನ ಅವಭೃತ ಜರುಗುತ್ತದೆ. ಪಾಣೆಮಂಗಳೂರು ಸಮೀಪ ಶ್ರೀ ಭಯಂಕೇಶ್ವರ ದೇವಾಲಯದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಅವಭೃತ ಉತ್ಸವ ಜರುಗುತ್ತದೆ. ಏಕಾದಶ ರುದ್ರಾಭಿಷೇಕ, ಶತರುದ್ರಾಭಿಷೇಕ ಇತ್ಯಾದಿ ವಿಶೇಷ ಸೇವೆಗಳು ಭಕ್ತಾದಿಗಳಿಂದ ಜರುಗುತ್ತದೆ. ನಿತ್ಯವೂ ರುದ್ರಾಭಿಷೇಕ ಸೇವೆ ಇಲ್ಲಿ ಪ್ರಸಿದ್ಧ. ಮೊಗರನಾಡು ಸೀಮೆಯ ಭಕ್ತಾದಿಗಳು ಶ್ರೀ ನಿಟಿಲಾಕ್ಷ ದೇವರ ಅನುಗ್ರಹದಿಂದ ಇಷ್ಟಾರ್ಥವನ್ನು ಪಡೆಯುತ್ತಿದ್ದಾರೆ.