84
ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಯಲ್ಲಿ 34564 ಅಧಿಸೂಚಿತ ಸಂಸ್ಥೆಗಳು, ಮೈಸೂರು ಮಹಾರಾಜ ಸಂಸ್ಕೃತ ಕಾಲೇಜು, ಆಗಮ ವಿಭಾಗ ಮತ್ತು ಮೇಲುಕೋಟೆ ಸರ್ಕಾರಿ ಸಂಸ್ಕ್ರತ ಕಾಲೇಜು ಹಾಗೂ ಆಂಧ್ರಪ್ರದೇಶದ ತಿರುಮಲ, ಮಂತ್ರಾಲಯ, ಶ್ರೀಶೈಲ, ಮಹಾರಾಷ್ಟ್ರದ ತುಳಜಾಪುರ ಮತ್ತು ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರಗಳು ಒಳಪಟ್ಟಿರುತ್ತವೆ.
ಅಧಿಸೂಚಿತ ಸಂಸ್ಥೆಗಳ ಪ್ರವರ್ಗವಾರು ವಿವರ ಕೆಳಕಂಡಂತಿದೆ
.• 205 ಪ್ರವರ್ಗ "ಎ" - 25,00,000/- ರೂಪಾಯಿಗಳನ್ನು ಮೀರುವ ಒಟ್ಟು ವಾರ್ಷಿಕ ವರಮಾನ ಹೊಂದಿರುವ ಅಧಿಸೂಚಿತ ಸಂಸ್ಥೆಗಳು.
• 193 ಪ್ರವರ್ಗ "ಬಿ" - 5,00,000/- ರೂಪಾಯಿಗಳನ್ನು ಮೀರುವ ಆದರೆ 25,00,000/- ರೂಪಾಯಿಗಳನ್ನು ಮೀರದ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿರುವ ಅಧಿಸೂಚಿತ ಸಂಸ್ಥೆಗಳು.
• 34166 ಪ್ರವರ್ಗ "ಸಿ" - 5,00,000/- ರೂಪಾಯಿಗಳನ್ನು ಮೀರದ ಒಟ್ಟು ವಾರ್ಷಿಕ ವರಮಾನವನ್ನು ಹೊಂದಿರುವ ಅಧಿಸೂಚಿತ ಸಂಸ್ಥೆಗಳು.
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ಸಂಸ್ಥೆಗಳ ನಿರ್ವಹಣೆಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಹಾಗೂ ನಿಯಮಗಳು 2002 ರ ಅನ್ವಯ ನಿರ್ವಹಿಸಲಾಗುತ್ತಿದೆ.ಸದರಿ ಕಾಯ್ದೆಗೆ ಕರ್ನಾಟಕ ಅಧಿನಿಯಮ 12/2012 ರನ್ವಯ ತಿದ್ದುಪಡಿಯನ್ನು ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ/148/ಮುಸೇವಿ/2011, ದಿ:27-01-2012 ರ ಅನ್ವಯ ನಿಯಮಗಳಿಗೆ ತಿದ್ದುಪಡಿಯನ್ನು ತರಲಾಗಿದೆ.
ಪ್ರಸ್ತುತ ಮಾನ್ಯ ಉಚ್ಚನ್ಯಾಯಾಲಯದ ವಿಭಾಗೀಯ ಪೀಠವು ರಿಟ್ ಅರ್ಜಿ ಸಂಖ್ಯೆ:64805-64868/2011 ರಲ್ಲಿ ದಿ:17-11-2015 ರಂದು ನೀಡಿರುವ ತೀರ್ಪಿನನ್ವಯ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 2011ನ್ನು ರದ್ದಪಡಿಸಿರುತ್ತದೆ. ಸದರಿ ಆದೇಶದ ವಿರುದ್ದ ಸರ್ಕಾರವು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲ್ಮಾಡಿರುವ ಎಸ್.ಎಲ್.ಪಿ ಸಂಖ್ಯೆ: 6834-699/2016 ರಲ್ಲಿ ದಿ:18-04-2016 ರಲ್ಲಿ ತಡೆಯಾಜ್ಞೆ ನೀಡಿದ್ದು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011 ರ ಕಾಯ್ದೆಯು ಪುನ: ಜಾರಿಗೆ ಬಂದಿರುತ್ತದೆ. ಸದರಿ ಕಯ್ದೆ ಮತ್ತು ನಿಯಮಾವಳಿಗಳನ್ವಯ ಅಧಿಸೂಚಿತ ಸಂಸ್ಥೆಗಳ ಆಡಳಿತವನ್ನು ನಿರ್ವಹಿಸಲಾಗುತ್ತಿದೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಆರ್ ಡಿ/139/ಮುಸೇವಿ/2009, ದಿ:18-11-2010 ರಲ್ಲಿ ಕರ್ನಾಟಕ ಛತ್ರಗಳ (ಹೊರ ರಾಜ್ಯದಲ್ಲಿರುವ) ಆಡಳಿತ ನಿಯಮಾವಳಿ 2010 ಅನ್ನು ರೂಪಿಸಿದ್ದು, ಅದರಂತೆ ಹೊರ ರಾಜ್ಯಗಳಲ್ಲಿರುವ ಕರ್ನಾಟಕ ರಾಜ್ಯ ಛತ್ರಗಳ ಆಡಳಿತ ನಿರ್ವಹಿಸಲಾಗುತ್ತಿದೆ.