ಶ್ರೀ ಮಹಿಷಮರ್ದಿನಿ ದೇವಾಲಯ, ನೀಲಾವರ, ಉಡುಪಿ - 576213, ಉಡುಪಿ .
Sri Mahishamardini Temple, Neelavar, Udupi - 576213, Udupi District [TM000054]
×
Temple History
ಸ್ಥಳ ಪುರಾಣ
ಕರಾವಳಿ ಕರ್ನಾಟಕ ಇತಿಹಾಸ ಪ್ರಸಿದ್ದವಾದ ಪ್ರದೇಶ. ಆಳುಪ, ಹೊಯ್ಸಳ, ವಿಜಯನಗರ ಮುಂತಾದ ಅನೇಕ ರಾಜ ಮನೆತನಗಳ ಆಡಳಿತಕ್ಕೊಳಪಟ್ಟ ಈ ಪರಿಸರದಲ್ಲಿ ಅನೇಕ ಧಾರ್ಮಿಕ ಹಾಗೂ ಸಾಂಸ್ಕçತಿಕ ಕೇಂದ್ರಗಳಿದ್ದರೂ ಉಡುಪಿ ತಾಲೂಕಿನ ‘ನೀರುವಾರ’ ಅಥವಾ ‘ನೀಲಾವರ’ ಪ್ರಮುಖ ಸ್ಥಾನವನ್ನು ಪಡೆದಿದೆ. ಬ್ರಹ್ಮಾವರದಿಂದ ಹೆಬ್ರಿಗೆ ಹೋಗುವ ರಸ್ತೆಯಲ್ಲಿ ಕುಂಜಾಲಿನಿಂದ ಮೂರು ಕಿ.ಮೀ. ಉತ್ತರಕ್ಕೆ ಹೋದರೆ ಸಿಗುವುದು ಪ್ರಕೃತಿ ರಮಣೀಯವಾದ ನೀಲಾವರ. ಇಲ್ಲಿ ಪ್ರಮುಖ ಆಕರ್ಷಣೆ ಮಹಿಷಮರ್ದಿನೀ (ದುರ್ಗಾ ಭಗವತಿ) ದೇವಾಲಯ.
ಈ ಮಹಿಷಮರ್ದಿನೀ ದೇವಾಲಯ ಬಹಳ ಪ್ರಾಚೀನವಾದುದು. ಮಹಿಷಮರ್ದಿನಿಯು ಸಹಸ್ರಾರು ಭಕ್ತ ಕುಟುಂಬಗಳ ಕುಲದೇವತೆ ಮಾತ್ರವಲ್ಲ, ಅವರ ಧಾರ್ಮಿಕ ಜೀವನದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದ ಮಹಾ ಮಾತೆಯೂ ಹೌದು. ಈ ದೇವಸ್ಥಾನದ ಪ್ರಾಚೀನತೆಯನ್ನು ಗುರುತಿಸುವಲ್ಲಿ ಪ್ರತಿಮಾ ಶಾಸ್ತç ಹಾಗೂ ಇಲ್ಲಿ ದೊರೆಯುವ...ಕರಾವಳಿ ಕರ್ನಾಟಕ ಇತಿಹಾಸ ಪ್ರಸಿದ್ದವಾದ ಪ್ರದೇಶ. ಆಳುಪ, ಹೊಯ್ಸಳ, ವಿಜಯನಗರ ಮುಂತಾದ ಅನೇಕ ರಾಜ ಮನೆತನಗಳ ಆಡಳಿತಕ್ಕೊಳಪಟ್ಟ ಈ ಪರಿಸರದಲ್ಲಿ ಅನೇಕ ಧಾರ್ಮಿಕ ಹಾಗೂ ಸಾಂಸ್ಕçತಿಕ ಕೇಂದ್ರಗಳಿದ್ದರೂ ಉಡುಪಿ ತಾಲೂಕಿನ ‘ನೀರುವಾರ’ ಅಥವಾ ‘ನೀಲಾವರ’ ಪ್ರಮುಖ ಸ್ಥಾನವನ್ನು ಪಡೆದಿದೆ. ಬ್ರಹ್ಮಾವರದಿಂದ ಹೆಬ್ರಿಗೆ ಹೋಗುವ ರಸ್ತೆಯಲ್ಲಿ ಕುಂಜಾಲಿನಿಂದ ಮೂರು ಕಿ.ಮೀ. ಉತ್ತರಕ್ಕೆ ಹೋದರೆ ಸಿಗುವುದು ಪ್ರಕೃತಿ ರಮಣೀಯವಾದ ನೀಲಾವರ. ಇಲ್ಲಿ ಪ್ರಮುಖ ಆಕರ್ಷಣೆ ಮಹಿಷಮರ್ದಿನೀ (ದುರ್ಗಾ ಭಗವತಿ) ದೇವಾಲಯ.
ಈ ಮಹಿಷಮರ್ದಿನೀ ದೇವಾಲಯ ಬಹಳ ಪ್ರಾಚೀನವಾದುದು. ಮಹಿಷಮರ್ದಿನಿಯು ಸಹಸ್ರಾರು ಭಕ್ತ ಕುಟುಂಬಗಳ ಕುಲದೇವತೆ ಮಾತ್ರವಲ್ಲ, ಅವರ ಧಾರ್ಮಿಕ ಜೀವನದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದ ಮಹಾ ಮಾತೆಯೂ ಹೌದು. ಈ ದೇವಸ್ಥಾನದ ಪ್ರಾಚೀನತೆಯನ್ನು ಗುರುತಿಸುವಲ್ಲಿ ಪ್ರತಿಮಾ ಶಾಸ್ತç ಹಾಗೂ ಇಲ್ಲಿ ದೊರೆಯುವ ಶಾಸನಗಳು ಪ್ರಮುಖ ಆಕರಗಳಾಗಿವೆ. ಇಲ್ಲಿನ ಮೂಲ ಮೂರ್ತಿ ಮಹಿಷಾಸುರ ಮರ್ದಿನೀ ಚತುರ್ಬಾಹು ವಿಗ್ರಹ. ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖವಿದೆ. ಇನ್ನೊಂದು ಎಡಗೈಯಲ್ಲಿ ಮಹಿಷಾಸುರನನ್ನು ಎತ್ತಿ ಹಿಡಿದು ಅವನ ಕುತ್ತಿಗೆಯನ್ನು ಬಲಗೈಯಲ್ಲಿನ ತ್ರಿಶೂಲದಿಂದ ಇರಿಯುತ್ತಿರುವಂತೆ ಈ ಮೂರ್ತಿಯನ್ನು ಕೆತ್ತಲಾಗಿದೆ. ದೇವಿಯು ತನ್ನ ಬಲಗಾಲಿನಲ್ಲಿ ಮಹಿಷಾಸುರನನ್ನು ಮೆಟ್ಟಿಹಿಡಿದಂತೆ ಕೆತ್ತಲಾಗಿರುವ ಈ ಮೂರ್ತಿಯನ್ನು ಅಭ್ಯಸಿಸಿರುವ ದಿ. ಡಾ. ಪಿ. ಗುರುರಾಜ ಭಟ್ಟರು ಇದು ಸುಮಾರು 10 ನೇ ಶತಮಾನದ್ದಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಆಳುಪ ರಾಜವಂಶ ಇಲ್ಲಿ ದೀರ್ಘಕಾಲ ಆಳಿದ ರಾಜವಂಶ. ಅವರು ಉದ್ಯಾವರವನ್ನು ತಮ್ಮ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡಾಗ ನೀಲಾವರ ದೇವಸ್ಥಾನದ ಬಗ್ಗೆ ಹೆಚ್ಚು ಗಮನ ಹರಿಸಿದರು. ಆಳುಪ ಅರಸ ವೀರಪಾಂಡ್ಯನು 1258ನೇ ಇಸವಿ ಫೆಬ್ರವರಿ 24 ರಂದು ಹೊರಡಿಸಿದ ಶಾಸನ ಈ ಕ್ಷೇತ್ರದ ಬಗ್ಗೆ ತಿಳಿಸುವ ಅತ್ಯಂತ ಪ್ರಾಚೀನ ದಾಖಲೆಯಾಗಿದೆ. ನೀಲಾವರದ ಗ್ರಾಮ ಸಭೆ ‘ನೀರುವಾರ ಮೂನ್ನೂರಕ್ಕೆ’ ರಾಜನು ನೀಡಿದ ನಿರ್ದೇಶನವನ್ನು ಈ ಶಾಸನದಲ್ಲಿ ತಿಳಿಸಲಾಗಿದೆ. ಅದರಲ್ಲಿ ಗ್ರಾಮದ ಆದಾಯದಲ್ಲಿ 100 ಗದ್ಯಾಣ (ನಾಣ್ಯ)ಗಳನ್ನು ಅರಮನೆಗೂ ಮೂವತ್ತು ಗದ್ಯಾಣಗಳನ್ನು ಅಧಿಕಾರಿಗೂ ಹಾಗೂ ಉಳಿದ ಮೂವತ್ತು ಗದ್ಯಾಣಗಳನ್ನು ತನ್ನ ವೆಚ್ಚಕ್ಕೆ ವಿನಿಯೋಗಿಸುವಂತೆ ತಿಳಿಸಲಾಗಿದೆ.
ಆಳುಪ ರಾಣಿ ಬಲ್ಲ ಮಹಾದೇವಿಯ ಪ್ರಥಮ ಶಾಸನ ನೀಲಾವರದಲ್ಲಿ ಲಭ್ಯವಾಗಿದೆ. ಅದರಲ್ಲಿ ಕ್ರಿ.ಶ. 1277ರ ಸಪ್ಟೆಂಬರ್ 12ರಂದು ಅರಮನೆಗೆ ಸಲ್ಲುವ 100 ಹೊನ್ನಿನ ಸಿದ್ದಾಯದಲ್ಲಿ ನೀರುವಾರದ ಭಗವತಿಗೆ ದತ್ತಿ ಬಿಟ್ಟ ವಿವರವನ್ನು ನೀಡಲಾಗಿದೆ. ಹೊಯ್ಸಳರಿಗೂ ಆಳುಪರಿಗೂ ವೈವಾಹಿಕ ಸಂಬಂಧ ಏರ್ಪಟ್ಟು, ಹೊಯ್ಸಳ ಮುಮ್ಮಡಿ ಬಲ್ಲಾಳ ಕ್ರಿ.ಶ. 1333ರಲ್ಲಿ ಕರಾವಳಿ ಕರ್ನಾಟಕದ ಈ ಪ್ರದೇಶದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದ. ಒಂದು ವಿಶೇಷವೆಂದರೆ ಹೊಯ್ಸಳರ ಆಳ್ವಿಕೆಯ ಪ್ರಥಮ ಶಾಸನ ದೊರೆಯುವುದು ನೀಲಾವರದಲ್ಲಿ. ಅದು ಸಹ ನೀರುವಾರ ಗ್ರಾಮಸಭೆಯು ಕೆಲವು ಭೂಮಿಯ ಮೇಲಿನ ತೆರಿಗೆಯನ್ನು ದುರ್ಗಾಭಗವತಿ ದೇವಾಲಯಕ್ಕೆ ನೀಡಿದ ವಿಷಯವನ್ನು ತಿಳಿಸುತ್ತದೆ. ಹೊಯ್ಸಳರ ಇನ್ನೊಂದು ಶಾಸನವು ನೀಲಾವರದಲ್ಲಿ ದೊರೆತಿದೆ. ಕ್ರಿ.ಶ. 1344 ರ ಆಳುಪ ರಾಜ ಕುಲಶೇಖರನ ಶಾಸನವೂ ದುರ್ಗಾಭಗವತಿಗೆ ದಾನ ನೀಡಿದ್ದನ್ನು ತಿಳಿಸುತ್ತದೆ.
ಅಳುಪರ ನಂತರ ಅಧಿಕಾರಕ್ಕೆ ಬಂದ ವಿಜಯನಗರ ಅರಸರ ಕಾಲದಲ್ಲಿಯೂ ನೀಲಾವರ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕçತಿಕ ಕೇಂದ್ರವಾಗಿತ್ತು. ಕೂರಾಡಿಯ ಪ್ರೌಢ ಶಾಲೆಯ ಸಮೀಪದ ದೊರೆತಿರುವ ಶಾಸನ ನೀಲಾವರ ದೇವಾಲಯಕ್ಕೆ ನೀಡಿದ ದತ್ತಿಯ ಬಗ್ಗೆ ತಿಳಿಸುತ್ತದೆ. ಕ್ರಿ.ಶ. 1387ರ ಇಮ್ಮಡಿ ಹರಿಹರನ ನೀಲಾವರದ ಶಾಸನವು ದೇವಾಲಯದ ಜೀರ್ಣೋದ್ಧಾರದ ವ್ಯವಸ್ಥೆ ಮಾಡಿದ ಬಗ್ಗೆ ಹಾಗೂ ಅಲ್ಲಿನ ಪೂಜೆಗೆ ದತ್ತಿ ಬಿಟ್ಟ ವಿಷಯವನ್ನು ತಿಳಿಸುತ್ತದೆ. ಇಮ್ಮಡಿ ಬುಕ್ಕರಾಯ (ರಾಜಕುಮಾರ) ನೀಲಾವರದಲ್ಲಿ ಆಡಳಿತ ತರಬೇತಿ ಪಡೆದ ವಿಷಯ ಈ ಶಾಸನ ತಿಳಿಸುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆAದರೆ ಈ ಶಾಸನ ಜೀರ್ಣೋದ್ಧಾರದ ಬಗ್ಗೆ ತಿಳಿಸುವುದರಿಂದ ನಾವು ಈ ದೇವಸ್ಥಾನದ ಪ್ರಾಚೀನತೆಯನ್ನು ನಿರ್ಣಯಿಸಬಹುದು. ಕ್ರಿ.ಶ. 1408ರ ಒಂದನೇ ದೇವರಾಯನ ಶಾಸನ ಹಾಗೂ ಕ್ರಿ.ಶ. 1464ರ ಮಲ್ಲಿಕಾರ್ಜುನನ ಶಾಸನವು ದೇವಾಲಯಕ್ಕೆ ನೀಡಿದ ದಾನವನ್ನು ಉಲ್ಲೇಖಿಸುತ್ತೇವೆ.
ಆದರೆ ಕ್ರಿ.ಶ. 1528ರ ವಿಜಯನಗರದ ಪ್ರಮುಖ ರಾಜ ಕೃಷ್ಣ ದೇವರಾಯನ ಶಾಸನ ತುಂಬಾ ಪ್ರಾಮುಖ್ಯವಾದುದು. ಬಾರಕೂರಿನ ರಾಜ್ಯಪಾಲ ವಿಜಯಣ್ಣ ಒಡೆಯನ ಆಳ್ವಿಕೆಯ ಕಾಲದಲ್ಲಿ ನೀಲಾವರ ಗ್ರಾಮದಲ್ಲಿ ಆಡಳಿತದ ಅತಿರೇಕ ಸಂಭವಿಸಿರಬೇಕು. ಅದಕ್ಕೆ ಪರಿಹಾರವಾಗಿ ದಾನ ನೀಡಿದ್ದನ್ನು ಈ ಶಾಸನ ಉಲ್ಲೇಖಿಸುತ್ತದೆ. ನೀಲಾವರ ಗ್ರಾಮದಿಂದ ಭಂಡಾರಕ್ಕೆ ಬರುವ ತೆರಿಗೆ ಸಿದ್ದಾಯದಲ್ಲಿ ಏಳೂವರೆ ಕಾಟಿ ಗದ್ಯಾಣಗಳನ್ನು ದುರ್ಗಾದೇವಿಗೆ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆ ನಡೆಯಲು ದಾನ ರೂಪದಲ್ಲಿ ನೀಡಲಾಗಿದೆ.
ಹೀಗೆ ಇಲ್ಲಿ ಆಳಿದ ಪ್ರತಿಯೊಂದು ರಾಜವಂಶಗಳ ನಿರಂತರ ಪ್ರೋತ್ಸಾಹ ಹಾಗೂ ಊರ ಮತ್ತು ಪರವೂರ ಭಕ್ತರ ಪೂರ್ಣ ಬೆಂಬಲದಿಂದ ನೀಲಾವರ ಒಂದು ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕçತಿಕ ಕೇಂದ್ರವಾಗಿ ಬೆಳೆಯಿತಲ್ಲದೆ. ಸಮೀಪವಿರುವ ಪಂಚಮೀಕಾನ ಸುಬ್ರಹ್ಮಣ್ಯನ ಆರಾಧನೆ ಹಾಗೂ ಪ್ರತಿವರ್ಷ ವೃಶ್ಚಿಕ ಮಾಸದಲ್ಲಿ ಜರಗುವ ಪಂಚಮೀ ತೀರ್ಥಸ್ನಾನ ಇಲ್ಲಿನ ಇತರ ಆಕರ್ಷಣೆಗಳು. ಮಹಿಷಮರ್ದಿನೀ ದೇವಾಲಯಕ್ಕೆ ಹೊಂದಿಕೊಂಡಂತೆ ವೀರಭದ್ರ ಮತ್ತು ಕಲ್ಕುಡ ದೈವಗಳೂ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತವೆ. ನೀಲಾವರದಲ್ಲಿ ಅನೇಕ ಉತ್ಸವಗಳು, ಹಬ್ಬಗಳು ನಡೆಯುತ್ತವೆ.
ಶ್ರೀ ಕ್ಷೇತ್ರ ನೀಲಾವರವು ಅತ್ಯಂತ ಪ್ರಾಚೀನವಾದದ್ದು. ಸಹ್ಯಾದ್ರಿಯ ಉತ್ತರ ಖಂಡದಲ್ಲಿರುವ ಈ ಪ್ರದೇಶವು ನೀರಿನಿಂದ ಆವರಿಸಲ್ಪಟ್ಟಿರುವುದರಿಂದ ನೀಲಾವರ ಎಂಬ ಹೆಸರನ್ನು ಪಡೆಯಿತು ಎಂದು ಹೇಳಲಾಗಿದೆ. ಹಿಂದೆ ಮಹಿಷನೆಂಬ ದೈತ್ಯೇಂದ್ರನನ್ನು ಸಂಹರಿಸುವುದಕ್ಕೋಸ್ಕರ ಸಕಲ ದೇವಾದಿ ದೇವತೆಗಳ ಶಕ್ತಿ ಎಲ್ಲವನ್ನೂ ಕ್ರೋಢೀಕರಿಸಿಕೊಂಡು ಶ್ರೀ ದೇವಿಯಾಗಿ ಅವಿರ್ಭವಿಸಿ, ಮಹಿಷನನ್ನು ಕೊಂದು, ಆ ಸಂಧರ್ಭದಲ್ಲಿ ತನ್ನ ಬಾಹುಗಳಲ್ಲಿ ಶಂಖ, ಚಕ್ರ, ತ್ರಿಶೂಲ ಧರಿಸಿ ಮಹಿಷನನ್ನು ಪಾದದಿಂದ ಮೆಟ್ಟಿ ನಿಂತ ದಿವ್ಯರೂಪ ಕಂಡ ಬ್ರಹ್ಮದೇವರು ವಿಶ್ವಕರ್ಮನಿಂದ ಅಂತಹುದೇ ವಿಗ್ರಹ ನಿರ್ಮಿಸಿ ಸೀತಾನದಿಯ ತಟದಲ್ಲಿ ಪ್ರತಿಷ್ಠಾಪಿಸಿ ಸತ್ಯಲೋಕಕ್ಕೆ ತೆರಳಿದನು. ಆದರೆ ಕೆಲ ಕಾಲದಲ್ಲಿ ದುಷ್ಟ ಮನಸ್ಸಿನ ಲೋಕ ದ್ವೇಷಿಗಳಿಂದ ಪ್ರತಿಮೆಯು ಕಿತ್ತು ಸೀತಾ ನದಿಗೆ ಎಸೆಯಲ್ಪಟ್ಟಿತು. ಅನಂತರ ತಪಸ್ಸಿಗಾಗಿ ಬಂದ ಗಾಲವ ಮುನಿಯು ಕೇಳಿದ ಅಶರೀರವಾಣಿಯಂತೆ ಸೀತಾ ನದಿಯ ಮಡುವಿನಲ್ಲಿರುವ ವಿಗ್ರಹವನ್ನು ಮೇಲೆತ್ತಿ ಪುನರ್ ಪ್ರತಿಷ್ಠಾಪಿಸಿದನು. ಗಾಲವರ ತಪಸ್ಸಿನಿಂದ ಪ್ರಸನ್ನಳಾದ ದೇವಿಯು ಭಕ್ತನ ಇಷ್ಟಾರ್ಥ ಕರುಣಿಸಲು ಪ್ರತಿಮೆಯಲ್ಲಿ ಐಕ್ಯಳಾದಳು. ಗಾಲವ ತಪಸ್ಸಿದ್ಧಿ ಹೊಂದಿದ ತೀರ್ಥ ಸ್ಥಳವು ಗಾಲವ ತೀರ್ಥವೆಂದು ಕರೆಯಲ್ಪಟ್ಟಿತು ಎಂಬ ಪ್ರತೀತಿ ಇದೆ.
ಪೌರಾಣಿಕ ಹಿನ್ನೆಲೆ
ನೀಲಾವರ ದೇವಸ್ಥಾನವು ಉಡುಪಿ ನಗರ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿದ್ದು, ಬ್ರಹ್ಮಾವರ ಸಮೀಪದ ಕುಂಜಾಲು ಎಂಬ ಗ್ರಾಮದಲ್ಲಿದ್ದು, ಸೀತಾ ನದಿತೀರದಲ್ಲಿರುವ ಒಂದು ಸುಂದರವಾದ ಪುಣ್ಯ ಸ್ಥಳವಾಗಿರುವುದು. ಈ ಕ್ಷೇತ್ರದಲ್ಲಿ ಮಹಿಷಮರ್ದಿನಿ, ಗಣೇಶ, ಸುಬ್ರಹ್ಮಣ್ಯ ಹಾಗು ವೀರಭದ್ರ ದೇವರಿಗೆ ಭಕ್ತರು ಪೂಜೆ ಸೇವೆ ಸಲ್ಲಿಸುತ್ತಾರೆ.ನೀಲಾವರ ದೇವಸ್ಥಾನವು ಉಡುಪಿ ನಗರ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿದ್ದು, ಬ್ರಹ್ಮಾವರ ಸಮೀಪದ ಕುಂಜಾಲು ಎಂಬ ಗ್ರಾಮದಲ್ಲಿದ್ದು, ಸೀತಾ ನದಿತೀರದಲ್ಲಿರುವ ಒಂದು ಸುಂದರವಾದ ಪುಣ್ಯ ಸ್ಥಳವಾಗಿರುವುದು. ಈ ಕ್ಷೇತ್ರದಲ್ಲಿ ಮಹಿಷಮರ್ದಿನಿ, ಗಣೇಶ, ಸುಬ್ರಹ್ಮಣ್ಯ ಹಾಗು ವೀರಭದ್ರ ದೇವರಿಗೆ ಭಕ್ತರು ಪೂಜೆ ಸೇವೆ ಸಲ್ಲಿಸುತ್ತಾರೆ.