ಶ್ರೀ ಮಹಾಗಣಪತಿ ದೇವಾಲಯವನ್ನು ನಿರ್ಮಿಸಿದವನು ಸೋದೆಯ ಅರಸನಾಗಿದ್ದ ರಾಮಚಂದ್ರ ನಾಯಕ.ಮೇಲ್ನೋಟಕ್ಕೆ ಇದು ಆಧುನಿಕ ದೇವಾಲಯದಂತೆ ಕಂಡುಬಂದರೂ ಮೂಲ ಗಣಪತಿ ದೇವಾಲಯ ಸ್ಥಾಪನೆಯಾಗಿದ್ದು ಸುಮಾರು 400 ವರ್ಷಗಳ ಹಿಂದೆ.ಶಿರಸಿ ಖೈಫಿಯತ್ತು ನಮಗೆ ಈ ಮಾಹಿತಿಯನ್ನು ಒದಗಿಸುತ್ತವೆ.ಈ ಖೈಫಿಯತ್ತು ಬರೆಯಲ್ಪಟ್ಟಿದ್ದು ಸುಮಾರು 200 ವರ್ಷಗಳ ಹಿಂದೆ.ಇದರಲ್ಲಿ ನಮೂದಿಸಿದಂತೆ ಯೀ ಶಿರಶಿವೂರು ಮಧ್ಯದಲ್ಲಿರುವ ಗಣಪತಿ ದೇವಸ್ಥಾನವನ್ನು,ರಾಮಚಂದ್ರ ನಾಯಕರು ಯೀ ಶಿರಸಿ ಹತ್ತಿರದಲ್ಲಿರುವ ಚೆನ್ನಪಟ್ಟಣದ ಕಿಲ್ಲೆಕಟ್ಟು ವಾಗ್ಯೆ ಈ ಗಣಪತಿ ದೇವಾಲಯವನ್ನು ಕಟ್ಟಿಸಿ ಗಣಪತಿ ಪ್ರತಿಷ್ಠೆ ಮಾಡಿಸಿ ಶಿಮೆಯೊಳಗೆ ಸ್ಥಾಪಿಸಿದ್ದು ಎಂಬುದಾಗಿದೆ.ಇದರಿಂದಾಗಿ ಗಣಪತಿ ದೇವಾಲಯವನ್ನು ರಾಮಚಂದ್ರ ನಾಯಕನು 1604 ರಿಂದ 1610 ರ ಮಧ್ಯಭಾಗದಲ್ಲಿ ನಿರ್ಮಿಸಿದ್ದು ತಿಳಿಯುತ್ತದೆ. ಇದರ ಗರ್ಭಗುಡಿಯು ಅಷ್ಟಪಟ್ಟಿಯ ವಿಧಾನದಿಂದ ಕಟ್ಟಲ್ಪಟ್ಟಿದೆ. ...