ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಕಸಬಾ ಹೋಬಳಿಯ ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಾಲಯದ ಪರಿಚಯ. ಕಲ್ಲೇದೇವರಪುರ ಗ್ರಾಮವು ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಈ ಗ್ರಾಮವು ಚಿತ್ರದುರ್ಗ- ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಚಿತ್ರದುರ್ಗದಿಂದ 25 ಕಿಲೋಮೀಟರ್ ಹಾಗೂ ಜಗಳೂರಿನಿಂದ 15 ಕಿಲೋಮೀಟರ್ ದೂರದಲ್ಲಿದೆ. ಕಲ್ಲೇಶ್ವರ ದೇವರು ನೆಲೆಸಿದ ಸ್ಥಳವಾದ ಕಾರಣಕ್ಕೆ ಈ ಗ್ರಾಮಕ್ಕೆ ಕಲ್ಲೇದೇವರಪುರ ಹೆಸರು ಬಂದಿದೆ. ಇದು ತಾಲ್ಲೂಕು/ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದೆನಿಸಿದೆ. ಐತಿಹ್ಯ: ಹಿಂದೆ ಈ ದೇವಾಲಯದ ಪ್ರದೇಶವೆಲ್ಲವೂ ಕಾಡುಪೆಳೆಯಿಂದ ಕೂಡಿದ್ದು ಪಕ್ಕದ ಬಯಲಿನಲ್ಲಿ ಮಲ್ಲಶೆಟ್ಟಿ ಎಂಬ ವ್ಯಾಪಾರಿಯೊಬ್ಬ ಪೆಳೆಯಿಂದ ಕಟ್ಟಿಗೆಯನ್ನು ತಂದು ನೆಲದಲ್ಲಿ ಹೂತಿದ್ದ ಒಂದು ಕಲ್ಲಿಗೆ ಮತ್ತೆರಡು ಕಲ್ಲುಗಳನ್ನು ಇಟ್ಟು ಒಲೆಯನ್ನು ಹೂಡಿ ಅಡುಗೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅನ್ನದ ಮಡಿಕೆಯಲ್ಲಿ ಅನ್ನದ ಜೊತೆಗೆ ರಕ್ತ ಕಾಣಲು ಶುರುವಾಯಿತು....