ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. ಶ್ರೀ ಕ್ಷೇತ್ರ ಗಾಣಗಾಪುರವು ಗುಲ್ಬರ್ಗಾ ನಗರದಿಂದ ಸುಮಾರು 50 ಕಿಲೋಮೀಟರುಗಳ ದೂರದಲ್ಲಿದೆ. ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿ ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾಪುರ ರೈಲುನಿಲ್ದಾಣದಿಂದ 22 ಕಿಮೀ ದೂರದಲ್ಲಿ ಭೀಮಾ- ಅಮರಜ ನದಿಗಳ ಸಂಗಮದ ಹತ್ತಿರ ಈ ಊರು ಇದೆ. ಶ್ರೀಗುರುಚರಿತ್ರೆ ಎಂಬ ಗ್ರಂಥದಲ್ಲಿ ಇದನ್ನು ಗಾಣಗಾಪುರ, ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂಬ ಹೆಸರುಗಳಿಂದ ಉಲ್ಲೇಖಿಸಲಾಗಿದೆ. ದತ್ತಾವತಾರಿ ಎಂದು ಪ್ರಸಿದ್ಧಿಹೊಂದಿರುವ ಶ್ರೀನರಸಿಂಹ ಸರಸ್ವತಿಯವರು ವಾಡಿ ಎಂಬ ಊರಿನಿಂದ ಇಲ್ಲಿಗೆ ಬಂದು ಸುಮಾರು 23 ವರ್ಷ ನೆಲೆಸಿದ್ದರು. ಈ ಅವಧಿಯಲ್ಲಿ ಇಲ್ಲಿ ದತ್ತ ಸಂಪ್ರದಾಯವನ್ನು ಅನುಸರಿಸುವವರ ಸಂಖ್ಯೆ ಹೆಚ್ಚಾಯಿತು. ಸರಸ್ವತೀಯವರು ಮೊದಲು ಸಂಗಮದ ಹತ್ತಿರವೇ ವಾಸವಾಗಿದ್ದು ಅನಂತರ ಊರ...