ಈ ಹಿಂದೆ ರಾವಣನ ಬಂದುವಾದ ಖರನೆಂಬ ಮಹಾಸುರನು ಶಿವನಿಗೆ ಸಮಾನವಾದ ಪರಾಕ್ರಮ ಉಳ್ಳವನಾಗಿ ದಂಡಕಾರಣ್ಯದಲ್ಲಿ ವಾಸವಾಗಿದ್ದನು. ಆತನ ಪತ್ನಿಯಾದ ಕುಂಬಮುಖಿಯಿಂದಲೂ ತಂಗಿಯಾದ ಶೂರ್ಪನಖಿಯಿಂದಲೂ, ದೂಷಣ, ತ್ರಿಶಿರಾದಿ ಅನುಚರರಿಂದಲೂ, ಕೂಡಿಕೊಂಡು ತನ್ನ ಅಣ್ಣನಾದ ರಾವಣನ ಅಪ್ಪಣೆಯಂತೆ ಲಂಕಾನಗರಿಗೆ ಉತ್ತರ ದಿಕ್ಕಿನ ಈ ದಂಡಕಾರಣ್ಯವನ್ನು ಪಾಲಿಸುತ್ತಿದ್ದನು. ಈ ಖರಾಸುರನು ರಾಕ್ಷಸನಾಗಿದ್ದರೂ, ಧರ್ಮಿಷ್ಠನೂ, ಪರಾಕ್ರಮಿಯೂ ಆಗಿದ್ದನಲ್ಲದೇ ಸದಾ ಕಾಲವು ತನ್ನ ಕುಲದೇವನಾದ ಶಂಕರನನ್ನು ಪೂಜಿಸುತ್ತ ಇರುತ್ತಿದ್ದನು. ಈತನ ಪತ್ನಿಯಾದ ಕುಂಭಮುಖಿಯೂ ಸಹ ಪತಿವೃತಾ ಪಾರಾಯಣಳು, ಸಾಧು ಸ್ವಭಾವದವಳು ಆಗಿದ್ದು ಸದಾ ಕಾಲ ತನ್ನ ಪತಿಯ ಜೊತೆಯಲ್ಲಿ ಪಾರ್ವತಿ ಪರಮೇಶ್ವರರ ಸೇವೆಯಲ್ಲಿ ತಲ್ಲೀನಳಾಗಿದ್ದಳು. ...