ಶ್ರೀ ಮಸಣಿಕಮ್ಮ ದೇವಸ್ಥಾನ, ಪಿರಿಯಾಪಟ್ಟಣ, ಮೈಸೂರು, ಮೈಸೂರು .
Sri Masanikamma Temple, Periyapatna, Mysuru, Mysuru District [TM000174]
×
Temple History
ಇತಿಹಾಸ
ಪಿರಿಯಾಪಟ್ಟಣದ ಮಸಣಿಕಮ್ಮ ದೇವಸ್ಥಾನವು ತುಮಕೂರು ಹಾಸನ ಕೊಡಗು, ಮೈಸೂರು ಮಂಡ್ಯ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯ ಕೇರಳ ಮುಂತಾದ ಸ್ಥಳಗಳ ಭಕ್ತಾದಿಗಳಿಗೆ ಒಲಿದ ದೇವತೆಯಾದ, ಅವರುಗಳ ಮನೋಕಾಮನೆಗಳನ್ನು ಈಡೇರಿಸುವ ದೇವತೆಯಾದ್ದರಿಂದ ದೂರದೃಷ್ಟಿಯುಳ್ಳ ಶ್ರೀ ಮಸಣಿಕಮ್ಮ ದೆವ್ವಗಳ ಕಾಟವನ್ನು ತಪ್ಪಿಸುವ ದೇವತೆಯಾಗಿದ್ದಾಳೆ.
ಶ್ರೀ ಮಸಣಿಕಮ್ಮ ಪಿರಿಯಾಪಟ್ಟಣದ ಹಿರೀ ದೇವತೆಯಾಗಿದ್ದು ಉಜ್ಜಯಿನೀ ದೇಶದ ಬಿಜ್ಜಳ ರಾಜನ 7 ಜನ ಹೆಣ್ಣುಮಕ್ಕಳಲ್ಲಿ ಹಿರಿಯವಳಾಗಿದ್ದು ಚಾಮುಂಡಿ ಕಿರಿಯವಳೆಂಬ ಪ್ರತೀತಿಯಿದೆ. ಈಕೆ ಪಿರಿಯಾಪಟ್ಟಣದ ಹಿರಿದೇವತೆ. ಚೆಂಗಾಳ್ವ ರಾಜ್ಯ ದೇವತೆ, ಇಷ್ಟದೇವತೆ, ಮನೆದೇವರು ಆಗಿದ್ದು, ಉರಿಮಸಣಿ, ಕೊಡಗಿನ ಮಮ್ಮಾಯಿ ಎಂಬ ಹೆಸರಿದ್ದು ಚೆಂಗಾಳ್ವ ಪ್ರಭುಗಳ ಕುಲದೇವತೆಯಾಗಿದ್ದು ಈಕೆ ಸ್ಮಶಾನದೇವಿಯೂ ಆಗಿದ್ದು, ಮೂಲತ: ಬ್ರಾಹ್ಮಣ ಕುವರಿಯಾಗಿದ್ದಳೆಂದು ತಿಳಿದು ಬರುತ್ತದೆ.
ಮಸಣಿಕಮ್ಮನನ್ನು ಪೂಜಿಸುವ ಪೂಜಾರಿಗಳು ಬೆಸ್ತರು, ಅಲ್ಲದೆ ಎಲ್ಲಾ ಜಾತಿಯವರೂ ಈ ದೇವಿಯನ್ನು ಪೂಜಿಸಿ ಹರಕೆ ಸಲ್ಲಿಸುವ...ಪಿರಿಯಾಪಟ್ಟಣದ ಮಸಣಿಕಮ್ಮ ದೇವಸ್ಥಾನವು ತುಮಕೂರು ಹಾಸನ ಕೊಡಗು, ಮೈಸೂರು ಮಂಡ್ಯ ಜಿಲ್ಲೆಗಳಿಂದ ಮತ್ತು ನೆರೆ ರಾಜ್ಯ ಕೇರಳ ಮುಂತಾದ ಸ್ಥಳಗಳ ಭಕ್ತಾದಿಗಳಿಗೆ ಒಲಿದ ದೇವತೆಯಾದ, ಅವರುಗಳ ಮನೋಕಾಮನೆಗಳನ್ನು ಈಡೇರಿಸುವ ದೇವತೆಯಾದ್ದರಿಂದ ದೂರದೃಷ್ಟಿಯುಳ್ಳ ಶ್ರೀ ಮಸಣಿಕಮ್ಮ ದೆವ್ವಗಳ ಕಾಟವನ್ನು ತಪ್ಪಿಸುವ ದೇವತೆಯಾಗಿದ್ದಾಳೆ.
ಶ್ರೀ ಮಸಣಿಕಮ್ಮ ಪಿರಿಯಾಪಟ್ಟಣದ ಹಿರೀ ದೇವತೆಯಾಗಿದ್ದು ಉಜ್ಜಯಿನೀ ದೇಶದ ಬಿಜ್ಜಳ ರಾಜನ 7 ಜನ ಹೆಣ್ಣುಮಕ್ಕಳಲ್ಲಿ ಹಿರಿಯವಳಾಗಿದ್ದು ಚಾಮುಂಡಿ ಕಿರಿಯವಳೆಂಬ ಪ್ರತೀತಿಯಿದೆ. ಈಕೆ ಪಿರಿಯಾಪಟ್ಟಣದ ಹಿರಿದೇವತೆ. ಚೆಂಗಾಳ್ವ ರಾಜ್ಯ ದೇವತೆ, ಇಷ್ಟದೇವತೆ, ಮನೆದೇವರು ಆಗಿದ್ದು, ಉರಿಮಸಣಿ, ಕೊಡಗಿನ ಮಮ್ಮಾಯಿ ಎಂಬ ಹೆಸರಿದ್ದು ಚೆಂಗಾಳ್ವ ಪ್ರಭುಗಳ ಕುಲದೇವತೆಯಾಗಿದ್ದು ಈಕೆ ಸ್ಮಶಾನದೇವಿಯೂ ಆಗಿದ್ದು, ಮೂಲತ: ಬ್ರಾಹ್ಮಣ ಕುವರಿಯಾಗಿದ್ದಳೆಂದು ತಿಳಿದು ಬರುತ್ತದೆ.
ಮಸಣಿಕಮ್ಮನನ್ನು ಪೂಜಿಸುವ ಪೂಜಾರಿಗಳು ಬೆಸ್ತರು, ಅಲ್ಲದೆ ಎಲ್ಲಾ ಜಾತಿಯವರೂ ಈ ದೇವಿಯನ್ನು ಪೂಜಿಸಿ ಹರಕೆ ಸಲ್ಲಿಸುವ ಸಂಪ್ರದಾಯವಿದ್ದರೂ ಪಿರಿಯಾಪಟ್ಟಣದ ಕೋಟೆಯಲ್ಲಿರುವ ಶ್ಯಾನುಬೋಗ ಸತ್ಯನಾರಾಯಣ ರವರ ವಂಶದವರು ಮಾತ್ರ ಈ ದೇವತೆಯ ಮೆರವಣಿಗೆ ಬೀದಿಯಲ್ಲಿ ಬರುತ್ತಿದ್ದರೆ ಅವಳ ದರ್ಶನವನ್ನು ಮಾಡಕೂಡದೆಂದು ಮನೆ ಮಂದಿಯೆಲ್ಲ ಮನೆಯೊಳಕ್ಕೆ ಸೇರಿ ಬಾಗಿಲನ್ನು ಭದ್ರಪಡಿಸಿಕೊಳ್ಳುತ್ತಾರೆ. ಅವರು ದೇಗುಲದ ಕಡೆಗೆ ತಲೆ ಹಾಕಿಯೂ ಮಲಗುವುದಿಲ್ಲ. ಇದಕ್ಕೆಲ್ಲ ಕಾರಣವೆಂದರೆ.
ಬಹಳ ವರ್ಷಗಳ ಹಿಂದೆ ಸತ್ಯನಾರಾಯಣ ಅವರ ವಂಶದ ಹಿರೀಕರಲ್ಲಿ ಹೆಣ್ಣುಮಗಳೊಬ್ಬಳಿದ್ದಳು. ಅವಳು ಪ್ರತಿನಿತ್ಯ ಮನೆಯಲ್ಲಿ ನಡೆಯುತ್ತಿದ್ದ ಪೂಜೆಗೆ ಹೂಗಳನ್ನು ಆರಿಸಿ ತರಲು ಇತರೆ ಹೆಣ್ಣು ಮಕ್ಕಳೊಡನೆ ಹೋಗುತ್ತಿದ್ದಳು. ಎಲ್ಲ ಮಕ್ಕಳು ಹೂವಾರಿಸುತ್ತಿದ್ದರೆ ಇವಳು ಉಯ್ಯಾಲೆ ಮುಂತಾದ ಆಟಗಳಲ್ಲಿ ಮೈಮರೆತು ಮನೆಗೆ ಹೋಗುವ ಹೊತ್ತಾಯಿತೆಂದ ಕೂಡಲೇ ಓಡೋಡಿ ಆ ಪಕ್ಕದಲ್ಲೇ ಇದ್ದ ಬೆಸ್ತರ ಮನೆ ಮುಂದಕ್ಕೆ ಬಂದು ಅಲ್ಲಿ ಒಣ ಹಾಕಿದ್ದ ಒಂದಷ್ಟು ಕರ್ಮೀನುಗಳನ್ನು ತನ್ನ ಬುಟ್ಟಿಗೆ ತುಂಬಿಕೊಂಡು ತಂದು ಅದನ್ನು ತೆಗೆದುಕೊಂಡು ಹೋಗಿ ದೊಡ್ಡ ಕೆರೆಯಲ್ಲಿ ಅದ್ದುತ್ತಿದ್ದಳು. ಹಾಗೆ ಅದ್ದಿದಾಗ ಅವಕ್ಕೆಲ್ಲಾ ಜೀವ ಬಂದು ಅವೆಲ್ಲ ಕೆರೆಯಲ್ಲಿ ಸೇರುತ್ತಿದ್ದವು. ಕೂಡಲೇ ಕೆರೆಯಿಂದ ಬಗೆ ಬಗೆ ಬಣ್ಣದ ಘಮಘಮಿಸುವ ಹೂಗಳು ಮೇಲೇಳುತ್ತಿದ್ದವು. ಅವನ್ನೆಲ್ಲಾ ಬುಟ್ಟಿಗೆ ತುಂಬಿಕೊಂಡ ಹುಡುಗಿ ಮನೆಗೆ ತಂದಾಗ ಅವುಗಳನ್ನು ನೋಡಿದ ಮನೆಯವರಿಗೆಲ್ಲಾ ಆಶ್ಚರ್ಯವಾಗಿ ‘ಎಲ್ಲಿಂದ ತಂದೆಯಮ್ಮ?’ ಎಂದು ಕೇಳಿದರೆ ಅಸ್ಪಷ್ಟ ಉತ್ತರ ಹೇಳಿ ಜಾರಿಕೊಳ್ಳುತ್ತಿದ್ದಳು.
ಈ ಹುಡುಗಿಯ ತಂದೆಗೆ ಒಂದು ಬಿಡಿಸಲಾದ ಸಮಸ್ಯೆಯಾಗಿ ಕಂಡಳು. ಇವಳ ವರ್ತನೆ ಇತರ ಮಕ್ಕಳಂತಿಲ್ಲದಿರುವುದೇ ಅವನ ಕಳವಳಕ್ಕೆ ಕಾರಣವಾಯಿತು. ಇದರಿಂದಾಗಿ ಈ ಬಗೆಯ ಹೂವುಗಳನ್ನು ಇವಳು ಎಲ್ಲಿಂದ ತರುತ್ತಾಳೆ? ಎಂಬುದನ್ನು ನೋಡಬೇಕೆಂಬ ಕುತೂಹಲ ಅವಳ ತಂದೆಯದಾಯಿತು.
ಒಂದು ದಿನ ಈ ಗುಟ್ಟನ್ನು ಪರೀಕ್ಷಿಸಬೇಕೆಂದು ಅವನು ಆಕೆ ಹೂಗಳನ್ನಾರಿಸಲು ಹೋಗುವ ದಾರಿಯಲ್ಲಿ ಕಾದು ಕುಳಿತನು. ಅಲ್ಲಿ ಬೆಸ್ತರ ಮುದುಕಿಯೊಬ್ಬಳು ಸೊಸಲುಗಳನ್ನು ಒಣ ಹಾಕಿಕೊಂಡು ಕುಳಿತಿದ್ದಳು. ಎಲ್ಲಾ ಹೆಣ್ಣು ಮಕ್ಕಳು ಹೂವನ್ನಾರಿಸುತ್ತಿದ್ದರೆ, ಇವನ ಮಗಳು ಮಾತ್ರ ಆಟಪಾಠಗಳಲ್ಲಿ ಮೈಮರೆತು ಕುಣಿದು ಕುಪ್ಪಳಿಸುತ್ತಿದ್ದಳು. ಕೊನೆಯ ಘಳಿಗೆಯಲ್ಲಿ ಬೆಸ್ತರ ಕೇರಿಯತ್ತ ಓಡಿ ಹೋದಳು. ಈ ಹೆಣ್ಣುಮಗಳು ಎಂದಿನಂತೆ ಬಂದಾಗ ಆ ಮುದುಕಿ ಏನನ್ನೂ ವಿಚಾರಿಸದೆ ಒಂದು ಬೊಗಸೆ ಕರ್ಮೀನನ್ನು ತೆಗೆದು ಈ ಹುಡುಗಿಯ ಬುಟ್ಟಿಗೆ ಸುರಿದಳು. ಅಲ್ಲದೆ ಚಂದದ ಮಗಳನ್ನು ಮುದ್ದಾಡಿ ಮುತ್ತು ಕೊಟ್ಟು ಕಳಿಸಿಕೊಟ್ಟಳು.
ಈ ಹುಡುಗಿ ಕರ್ಮೀನನ್ನು ಬುಟ್ಟಿಯಲ್ಲಿ ಹಿಡಿದುಕೊಂಡು ಬರುತ್ತಿರುವುದನ್ನು ತಂದೆ ನೋಡಿ ಹೊಲಸು ವಾಸನೆಯನ್ನು ತಡೆಯಲಾರದೆ ಮೂಗನ್ನು ಮುಚ್ಚಿಕೊಂಡು ಸಿಟ್ಟಿನಿಂದ ಮಗಳನ್ನು ಗದರಿಸಿ ನಿಲ್ಲಿಸಿದನು. ಅನಿರೀಕ್ಷಿತವಾಗಿ ತಂದೆಯ ಧ್ವನಿ ಕಡೆಗೆ ಹುಡುಗಿ ತಿರುಗಿದಳು. ತಂದೆಯು ಕೋಪದಿಂದ ತನ್ನನ್ನು ಅಟ್ಟಿಸಿಕೊಂಡು ಬರುತ್ತಿರುವುದನ್ನು ಕಂಡಳು. ಹೆದರಿದ ಆ ಹುಡುಗಿ ಪಕ್ಕದಲ್ಲಿದ್ದ ಸ್ಮಶಾನದ ಕಡೆಗೆ ಓಡತೊಡಗಿದಳು. ಸ್ಮಶಾನದ ಪಕ್ಕದಲ್ಲಿ ಬೆಸ್ತರು ಬೇಯಿಸುತ್ತಿದ್ದ ಸುಣ್ಣದ ಗೂಡುಗಳಿದ್ದವು. ತಂದೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಆಕೆ ಉರಿಯುತ್ತಿದ್ದ ಸುಣ್ಣಕಲ್ಲು ಗೂಡಿನೊಳಕ್ಕೆ ಧುಮುಕಿದಳು. ‘ಸ್ಮಶಾನಕ್ಕೆ ಬಂದುದೂ ಅಲ್ಲದೆ ಸುಣ್ಣಕಲ್ಲು ಗೂಡಿಗೂ ಬಿದ್ದೆಯಾ ಮಸಣಿ’ ಎಂದು ಕೂಗುತ್ತಾ ಅವಳ ತಂದೆ ಹತ್ತಿರಕ್ಕೆ ಬರುತ್ತಿರುವಾಗ ಹತ್ತಿಕೊಂಡು ಉರಿಯುತ್ತಿದ್ದ ಅವಳು, ‘ಅಪ್ಪಾಜಿ, ನಾನಿನ್ನು ಹಿಂದಕ್ಕೆ ಬರುವವಳಲ್ಲ ‘ ಉರಿದು ಹೋದ ಮೇಲೆ ನಾನು, ಇಲ್ಲೇ ಉರಿಮಸಣಿಯೆಂಬ ಹೆಸರಿನಿಂದ ಒಡಮೂಡುತ್ತೇನೆ’
‘ ಕುಲಗೆಟ್ಟ ನೀನು ದೇವರಾಯ್ತಿಯೇನೆ? ಯಾರು ನಿನ್ನನ್ನು ಪೂಜಿಸ್ತಾರೆ?’‘ನನ್ನನ್ನು ಪ್ರೀತಿಯಿಂದ ಕಂಡ ಬೆಸ್ತರೇ ನನ್ನ ಪೂಜೆ ನಡೆಸಿಕೊಂಡು ಬರ್ತಾರೆ. ಅಪ್ಪಾಜಿ, ನೀವು ಪೂಜಿಸುವುದು ಬೇಡ: ನಿಮ್ಮ ಮನೆಯ ಹೆಣ್ಣುಮಕ್ಕಳಾದರೂ ನನ್ನಲ್ಲಿಗೆ ಬಂದು ಶ್ರೇಯಸ್ಸನ್ನು ಪಡೆಯಲಿ ‘ ಎಂದು ಹೇಳಿದಳು.
ಅವಳ ಮಾತಿನಿಂದ ಆ ಬ್ರಾಹ್ಮಣನ ಕೋಪ ಮತ್ತೂ ಇಮ್ಮಡಿಸಿತು. ಅವನು ಕೋಪೋದ್ರಿಕ್ತನಾಗಿ ‘ಕಬ್ಬಿನ ಹೊಟ್ಟೆಯಲ್ಲಿ ಸೂಲಂಗಿಯಂತೆ ಹುಟ್ಟಿದ ನಿನ್ನನ್ನು ನಮ್ಮ ವಂಶದ ಹೆಣ್ಣು ಮಕ್ಕಳಲ್ಲ ಯಾರೂ ನಿನ್ನನ್ನು ನೋಡುವುದೂ ಇಲ್ಲ : ನಿನ್ನ ಕಡೆಗೆ ತಲೆ ಹಾಕಿಯೂ ಮಲಗುವುದಿಲ್ಲ ‘ ಎಂದು ಬೈಯುತ್ತಾ ಹೊರಟು ಹೋದನು. ಇದನ್ನು ಕಂಡ ಬೆಸ್ತರು ಓಡೋಡಿ ಬಂದು ಬಗೆ ಬಗೆಯಾಗಿ ಬೇಡಿಕೊಂಡರೂ ಸುಣ್ಣಕಲ್ಲು ಗೂಡಿನಿಂದ ಹೊರಬರದೆ `ನನ್ನ ದೇಹ ಬೆಂಕಿಯಲ್ಲಿ ಬೆಂದು ಹೋದರೂ ನನ್ನ ಆತ್ಮಶಕ್ತಿ ನಾಶವಾಗುವುದಿಲ್ಲ. ನಾನು ಈ ಗ್ರಾಮವನ್ನು ರಕ್ಷಿಸುವ ದೇವತೆಯಾಗುತ್ತೇನೆ. ನಿಮ್ಮ ವಂಶದವರೇ ನನ್ನನ್ನು ಪೂಜೆ ಮಾಡಿಕೊಂಡು ಬರುವಂತಾಗಲಿ. ನಿಮಗೆಲ್ಲಾ ಶ್ರೇಯಸ್ಸಾಗುತ್ತದೆ ` ಎಂದು ಹೇಳಿ ಕರಗಿಹೋದಳು.
ಕೆಲವು ದಿನಗಳ ತರುವಾಯ ಸುಣ್ಣಕಲ್ಲಿನ ಗೂಡಿನಲ್ಲಿ ಒಂದು ಶಿಲಾಮೂರ್ತಿ ಮೂಡಿತು. ಅದನ್ನೇ ಉರಿಮಸಣಿಯ ವಿಗ್ರಹವೆಂದು ಅವರು ಭಯಭಕ್ತಿಯಿಂದ ಪೂಜಿಸತೊಡಗಿದರು. ಅಂದಿನಿಂದ ಉರಿಮಸಣಿ ಊರಿನ ಗ್ರಾಮ ದೇವತೆಯಾದಳು.
ಹೀಗೆ ಮೂಡಿದ ಮಸಣಿಕಮ್ಮನಿಗೆ ದೇವಾಲಯ ಕಟ್ಟಿಸಿದವರು ಯಾರು? ಎಂದು ಪ್ರಶ್ನಿಸಿದರು. ಅದಕ್ಕೂ ನಮ್ಮ ಜನಪದದಲ್ಲಿ ಒಂದು ಐತಿಹ್ಯ ಪ್ರಚಲಿತವಿದೆ.
ಚಂಗಾಳ್ವ ಅರಸರೊಬ್ಬನು ಚೋಳರ ಆಗ್ರಹಕ್ಕೆ ತುತ್ತಾದನು. ಆದ್ದರಿಂದ ಅವನನ್ನು ಬಂಧಿಸಿ ಚೋಳರಾಜನು ಬೀಡುಬಿಟಿದ್ದ ಸ್ಥಳಕ್ಕೆ ಸೈನಿಕರು ಎಳೆದುಕೊಂಡುಹೋಗುತ್ತಿದ್ದರು. ಮಾರ್ಗಾಯಾಸವನ್ನು ಪರಿಹರಿಸಿಕೊಳ್ಳಲು ಎಲ್ಲರೂ ಒಂದೆಡೆ ತಂಗಿದ್ದಾಗ ಚಂಗಾಳ್ವರಸರಿಗೆ ಜೊಂಪು ಹತ್ತಿದಂತಾಗಿ ಮೊಣಕೈಯನ್ನು ತಲೆಗೆ ಕಟ್ಟಿಕೊಂಡು ಹಾಗೆಯೇ ನೆಲದಲ್ಲಿ ಒರಗಿಕೊಂಡನು. ಹಾಗೆ ಮಲಗಿರುವಾಗ ಅವನಿಗೊಂದು ದಿವ್ಯ ಸ್ವಪ್ನವಾಯಿತು. ಆ ಸ್ವಪ್ನದಲ್ಲಿ ಮಸಣಿಕಮ್ಮ ಎಂಬ ದೇವತೆ ಕಾಣಿಸಿಕೊಂಡು ‘ನಾನು ಈ ಸ್ಥಳದಲ್ಲಿ ನೆಲೆಗೊಂಡಿರುವ ದೇವತೆ. ನನ್ನನ್ನು ನಂಬಿ ನೀನು ನನಗೆ ದೇವಾಲಯವನ್ನು ಕಟ್ಟಿಸಿ ನನ್ನನ್ನು ನಿನ್ನ ಮನೆದೇವತೆಯನ್ನಾಗಿ ಸ್ವೀಕರಿಸುವುದಾದರೆ, ನಿನ್ನನ್ನು ಈ ಶಿಕ್ಷೆಯಿಂದ ಪಾರು ಮಾಡುತ್ತೇನೆ’ ಎಂದಂತಾಯಿತು. ಚಂಗಾಳ್ವನು ಥಟ್ಟನೆ ಎಚ್ಚರವಾಗಿ ಶತ್ರುಗಳಿಗೆ ತಿಳಿಯದ ರೀತಿಯಲ್ಲಿ ದೇವಿಯ ಆದೇಶದಂತೆ ನಡೆದುಕೊಳ್ಳುವುದಾಗಿ ಹರಕೆಯನ್ನು ಕಟ್ಟಿಕೊಂಡನು. ಹಾಗೆ ಹರಕೆ ಕಟ್ಟಿಕೊಂಡ ಕೂಡಲೇ ಒಂದು ಮಾಯಾಸಿಂಹವು ಕಾಣಿಸಿಕೊಂಡು ಸೈನಿಕರ ಮೇಲೆ ಬಿದ್ದಿತು. ಈ ಅನಿರೀಕ್ಷಿತ ಆಘಾತದಿಂದ ಸೈನಿಕರು ಸತ್ತವೇ? ಕೆಟ್ಟೆವೋ? ಎಂದು ದಿಕ್ಕಾಪಾಲಾಗಿ ಓಡಿದರು. ಚಂಗಾಳ್ವನು ವಿಸ್ಮಯದಿಂದ ನೋಡನೋಡುತ್ತಿದ್ದಂತೆಯೇ ಸಿಂಹವು ಅದೃಶ್ಯವಾಯಿತು. ಚಂಗಾಳ್ವರಸನು ದೇವಿಯ ಕೃಪೆಯನ್ನು ಭಕ್ತಿಯಿಂದ ಸ್ಮರಿಸುತ್ತಾ ಸಿಂಹದ ನೆರವನ್ನು ಕೃತಜ್ಞತೆಯಿಂದ ನೆನೆಯುತ್ತಾ ಸಿಂಹವು ತನ್ನನ್ನು ರಕ್ಷಿಸಿದ ಊರನ್ನು ಸಿಂಹಪಟ್ಟಣವೆಂದು ಕರೆದು, ಅಲ್ಲಿ ಒಂದು ಕೋಟೆಯನ್ನು ಕಟ್ಟಿದನು, ಈ ಸಿಂಹಪಟ್ಟಣವು ಮುಂದೆ ಪಿರಿಯರಾಜನ ಕಾಲದಲ್ಲಿ ಪಿರಿಯಾಪಟ್ಟಣವಾಯಿತು.
ಈ ಚೆಂಗಾಳ್ವನನ್ನು ರಕ್ಷಿಸಿದ ಸಿಂಹ 7ನೇ ಶತಮಾನದಲ್ಲಿ ಆಳುತ್ತಿದ್ದ ಕದಂಬರ ಮೃಗೇಶವರ್ಮನೆಂದು ಹಿಟ್ನಹೆಬ್ಬಾಗಿಲಿನಲ್ಲಿ ದಾಖಲೆ ದೊರೆತ್ತಿದ್ದು ಕದಂಬರೂ ಸಹ ಈ ಪ್ರದೇಶವನ್ನು ಆಳುತ್ತಿದ್ದರೆಂದೂ ತಿಳಿದುಬರುವುದರ ಜೊತೆಗೆ ಪುನ್ನಾಟ ಎಂಬುದು ಈಗಿನ ಪೂನಾಡಹಳ್ಳಿ ಎಂದೂ ಮಸಣಿಕಮ್ಮನೇ ಜೈನಯಕ್ಷಿಣಿ, ಮಹಾಮಾನಸಿ, ಜನರ ಬಾಯಲ್ಲಿ ಮಸಣಿಯಾಗಿದ್ದಾಳೆ ಎಂದು ತಿಳಿದುಬರುತ್ತದೆ.
ಜನಪದ ಕಾವ್ಯದಲ್ಲಿ ಬರಿ ಮಸಣಿ ಯುದ್ಧದೇವತೆಯಾಗಿದ್ದಂತೆ ಕಂಡು ಬರುತ್ತದೆ. ವೀರರಾಜನ ಮನೆದೇವತೆ ಮಸಣಿಕಮ್ಮ. ಚಾಮುಂಡಿ ಮೈಸೂರು ಅರಸ ಕಂಠೀರವ ನರಸರಾಜ ಒಡೆಯರಿಗೂ ಘನಘೋರ ಯುದ್ಧವಾದ ಸಂದರ್ಭದಲ್ಲಿ ಮೈಯೆಲ್ಲಾ ಕಣ್ಣಾಗಿದ್ದ ಹಾಗೂ ಕೊಡಗಿನ ಮಮ್ಮಾಯಿಯೆಂದು ಕರೆಸಿಕೊಂಡಿದ್ದ ಉರಿಮಸಣಿಯು ಮೈಸೂರು ಅರಸರ ಸೈನ್ಯವನ್ನೆಲ್ಲಾ ನಿರ್ನಾಮ ಮಾಡತೊಡಗಿದಾಗ ಮೈಸೂರರಸರ ಮನೆದೇವತೆ ಚಾಮುಂಡಿ ಒಂದು ತಂತ್ರವನ್ನು ಮಾಡಿದಳು.
ಚಾಮುಂಡಿ ತನ್ನ ಇತರೆ ಸಹೋದರಿಯರ ಪೈಕಿ ಉತ್ತೇನಹಳ್ಳಿ ಮಾರಮ್ಮನನ್ನು ತನ್ನ ಅಕ್ಕ ಮಸಣಿಕಮ್ಮನ ಹತ್ತಿರ ಕಳುಹಿಸಿ ತನಗೆ ತುಂಬಾ ಕಾಯಿಲೆಯಾಗಿದ್ದು ಈಗಲೋ ಆಗಲೋ ಎಂಬಂತಿರುವ ತಾನು ತನ್ನ ಅಕ್ಕ ಮಸಣಿಕಮ್ಮನನ್ನು ಕೊನೆಘಳಿಗೆಯಲ್ಲಿ ನೋಡಲು ಬಯಸುತ್ತಿದ್ದಾಳೆ ಎಂಬ ಸಂದೇಶದಂತೆ ಮಸಣಿಕಮ್ಮ ತನ್ನ ಸಹೋದರ ಈರಯ್ಯನಿಗೆ ಯುದ್ಧದ ಪಾರುಪತ್ಯವನ್ನು ವಹಿಸಿ ಚಾಮುಂಡಿಯನ್ನು ನೋಡಲು ಹೋದಳು. ಸುಳ್ಳು ಖಾಯಿಲೆಯಿಂದ ಬದುಕಿದಂತೆ ಕಂಡಳು ಚಾಮುಂಡಿ.
ನಂತರ ಸಹೋದರಿಯರೆಲ್ಲರೂ ಕೂಡಿ ಕಣ್ಣುಮುಚ್ಚಾಲೆ ಆಟ ಆಡಲು ಪ್ರಾರಂಭಿಸಿದಾಗ ಚಾಮುಂಡಿ ಕಣ್ನುಮುಚ್ಚುವವಳ ಹಾಗೆ ಕುಳಿತು ಮೈಯೆಲ್ಲಾ ಕಣ್ಣಾಗಿರುವ ಮಸಣಿಕಮ್ಮನಿಗೆ ಮುಖದ ಕಣ್ಣುಗಳನ್ನು ಹೊರತುಪಡಿಸಿ ಮೈಮೇಲೆ ಇರುವ ಎಲ್ಲಾ ಕಣ್ಣುಗಳನ್ನು ಮುಚ್ಚಿಕೊಳ್ಳುವಂತೆ ತಿಳಿಸಿ ಆಕೆ ಕಣ್ಣು ಮುಚ್ಚಿಕೊಂಡಾಗ ಆಕೆಯ ಮೇಲೆ ಬೋರಲು ಹಾಕಿದಳು. ಮುಳ್ಳಿನ ಪಂಜರದಿಂದ ಮಸಣಿಕಮ್ಮನ ಮೈಮೇಲಿನ ಕಣ್ಣುಗಳೆಲ್ಲಾ ಕುರುಡಾದವು. ಹೀಗೆ ಚಾಮುಂಡಿಯಿಂದ ಮೋಸ ಹೋಗಿ ಮೈಸೂರು ಅರಸರಿಗೆ ಯುದ್ಧದಲ್ಲಿ ಜಯವಾಗಿ ಪಿರಿಯಾಪಟ್ಟಣದ ವೀರರಾಜ ಸೋತು ಪಿರಿಯಾಪಟ್ಟಣ ಮೈಸೂರು ಅರಸರ ವಶವಾಯಿತು.