ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವದ್ದೀಕೆರೆ ಗ್ರಾಮದ ಶ್ರೀ ಕಾಲಬೈರವೇಶ್ವರಸ್ವಾಮಿ ಪುರಾತನ ದೇವಾಲಯವಾಗಿದ್ದು, ಸದರಿ ಗ್ರಾಮವನ್ನು ಈ ಹಿಂದೆ ಸಾಧು ಸಜ್ಜನರ ನೆಲೆವೀಡು ಎನ್ನಲಾಗುತಿತ್ತು. ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಸದರಿ ಗ್ರಾಮದ ಕೆರೆಯ ಆಜುಬಾಜಿನಲ್ಲಿ ವದ್ದೀಬೇಳೆ (ವದ್ದೀಪೆಳೆ) ವ್ಯಾಪಕವಾಗಿ ಬೆಳೆದಿದ್ದರಿಂದ ವದ್ದೀಕೆರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ದೇವಾಲಯದ ಇತಿಹಾಸಕ್ಕೆ ಸಂಬಂಧಿಸಿದಂತೆ, ಈ ದೇವಾಲಯವು ಸುಮಾರು ಕ್ರಿ.ಶ. 8 ರಿಂದ 9ನೇ ಶತಮಾನದಲ್ಲಿ ಚೋಳರ ಕಾಲದಲ್ಲಿಯೇ ನಿರ್ಮಾಣ ಆಗಿರಬಹುದೆಂದು ಅಂದಾಜಿಸಲಾಗಿರುತ್ತದೆ. ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು ನೋಡಲು ವೈಶಿಷ್ಟ್ಯಪೂರ್ಣವಾಗಿದೆ, ಹೇಮಾವತಿಯ ವೀರಶೈವ ಸಮುದಾಯದ ಮನೆಯಲ್ಲಿ ಮೂರು ಕಾಲಭೈರವ ವಿಗ್ರಹಗಳಿದ್ದ ಕಾರಣ ಆ ಮನೆಗೆ ನಾನಾ ತೊಂದರೆಗಳು ಬಂದು ಎಲ್ಲರೂ ಮೃತರಾಗಿ ಒಬ್ಬ ಹೆಣ್ಣು ಮಗಳು ಉಳಿದಿದ್ದಳು, ಆಕೆಯ ಕನಸಿನಲ್ಲಿ ಸನ್ಯಾಸಿಯೊಬ್ಬ ಕಾಣಿಸಿಕೊಂಡು ಮನೆಯಲ್ಲಿ ಮೂರು...