ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪುಣ್ಯ ಕ್ಷೇತ್ರಗಳಲ್ಲಿ ಆರತಿ ಉಕ್ಕಡವೂ ಸಹ ಒಂದು. ಶ್ರೀರಂಗಪಟ್ಟಣದಿಂದ 10 ಕಿಲೋ ಮೀಟರ್ ದೂರದಲ್ಲಿ ಪ್ರಶಾಂತ ಹಚ್ಚ ಹಸುರಿನ ನಡುವೆ ನೆಲೆಸಿರುವಳು ತಾಯಿ ಶ್ರೀ ಅಹಲ್ಯಾದೇವಿ. ಎಲ್ಲಾ ವರ್ಗದವರಿಂದ ಪೂಜಿಸಲ್ಪಡುವ ಉಕ್ಕಡದ ಮಾರಮ್ಮನ ದರ್ಶನಕ್ಕಾಗಿ ಇಂದು ಲಕ್ಷಾಂತರ ಜನರು ಮುಂಜಾನೆಯಿಂದ ಸಂಜೆಯವರೆಗೂ ಕಾಯುವುದು ಈ ದೇವಸ್ಥಾನದ ವಿಶೇಷ. ಅದು ಮಹಾ ಮುನಿ ಗೌತಮರ ಆಶ್ರಮ. ದೇವಲೋಕದಿಂದ ಧರೆಗಿಳಿದು ಬಂದ ದೇವೇಂದ್ರ ಗೌತಮ ಮಹರ್ಷಿಗಳ ಪರ್ಣಕುಟೀರದ ಪ್ರಶಾಂತ ಪರಿಸರಕ್ಕೆ ಮಾರುಹೋದ. ದೇವೇಂದ್ರನಿಗೆ ತುಂಬಾ ದಾಹವಾಗತೊಡಗಿತ್ತು. ನೀರನ್ನು ಕುಡಿದರೂ ಅವನಿಗೆ ದಾಹ ತಣಿಯಲಿಲ್ಲ, ಕಾರಣ ಅವನ ಮನಸ್ಸು ಆಶ್ರಮದಲ್ಲಿದ್ದ ಒಂದು ಹೆಣ್ಣನ್ನು ನೋಡಿ ಚಂಚಲವಾಯಿತು. ಗೌತಮರ ಆಶ್ರಮದಲ್ಲಿ ಸೌಂದರ್ಯದ ಗಣಿ! ದೇವೇಂದ್ರನಿಗೆ ಕುತೂಹಲ ಹೆಚ್ಚಾಯಿತು. ಇವಳ ಚಲುವಿಗೆ ಮಾರುಹೋದ...