ಮುಳಬಾಗಿಲಿನ ಶ್ರೀ ಆಂಜನೇಯ ದೇವಾಲಯ ನಾಡಿನ ಬಹು ಜನಪ್ರಿಯ ದೇವಾಲಯಗಳಲ್ಲಿ ಒಂದು. ಸುಮಾರು 300 ಅಡಿ ಉದ್ದ ಮತ್ತು 200 ಅಡಿ ಅಗಲದ ಪ್ರಾಕಾರದೊಳಗಿನ ಆಂಜನೇಯ ದೇವಾಲಯವು ಪಶ್ಚಿಮಾಭಿಮುಖವಾಗಿದ್ದು ಗರ್ಭಗೃಹ, ಸುಖನಾಸಿ, ನವರಂಗ ಮತ್ತು ವಿಶಾಲವಾದ ಮುಖಮಂಟಪವನ್ನು ಹೊಂದಿದೆ. ಈ ದೇವಾಲಯದ ಗರ್ಭಗುಡಿಯಲ್ಲಿನ ಆಂಜನೇಯ ಸುಮಾರು 10 ಅಡಿ ಎತ್ತರವಿದ್ದು ವಿಜಯನಗರ ಪೂರ್ವ ರಚನೆಯಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ ಅರ್ಜುನನು ಈ ಆಂಜನೇಯನನ್ನು ಪ್ರತಿಷ್ಠಾಪಿಸಿದ್ದಾನೆ. ವೈಖಾಸನ ಮಹರ್ಷಿಗಳು ಈ ದೇವರನ್ನು ಪ್ರತಿಷ್ಠಾಪಿಸಿದರೆಂದು ಹೇಳುವ ಸ್ಥಳೀಯ ಮೂಲಗಳೂ ಇವೆ. ಆಂಜನೇಯನ ದೇವಾಲಯ ವಿಜಯನಗರ ಪೂರ್ವದಲ್ಲೇ ಇತ್ತಾದರೂ ಇದರ ಬಹು ಭಾಗಗಳು ನಿರ್ಮಾಣವಾಗಿದ್ದು ವಿಜಯನಗರ ಕಾಲದಲ್ಲಿ. ಈ ದೇವಾಲಯದ ಶ್ರೀರಾಮದೇವರ ಗುಡಿಯ ಪಶ್ಚಿಮ ಹೊರಭಿತ್ತಿಯಲ್ಲಿ ಕ್ರಿ.ಶ .1521 ರ ಶಾಸನವಿದೆ. ವಿಜಯನಗರ ಸಾಮ್ರಾಜ್ಯದ ಸಾಮ್ರಾಟನಾದ ಶ್ರೀಕೃಷ್ಣದೇವರಾಯನ...