ದೇವಾಲಯ ನಿರ್ಮಾಣ ಹಿನ್ನಲೆ : ಶ್ರೀ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಲು ಲಿಂಗರಾಜೇಂದ್ರ ಒಡೆಯನ ಮನೋವಾಂಛಿತ ಸಂಕಲ್ಪ ಕಾರಣವೆಂದು ತಿಳಿದುಬರುತ್ತದೆ. ಈ ಸಂಬಂಧ ಮೂರು ರೀತಿಯ ಕಾರಣಗಳನ್ನು ಹೇಳುವವರಿದ್ದಾರೆ. ಆದರೆ ನಿಖರ ಅಥವಾ ಸತ್ಯ ಯಾವುದು ತಿಳಿಯುವುದಿಲ್ಲ ಮತ್ತು ರಾಜಶಾಸನದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಮೊದಲನೆಯದಾಗಿ ಲಿಂಗರಾಜೇಂದ್ರ ಒಡೆಯನಿಗೆ, ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಹ್ಮಣನೊಬ್ಬ ತನ್ನ ಬಡತನವನ್ನು ನಿವಾರಿಸಿಕೊಳ್ಳಲು ಮಗಳನ್ನೇ ಒಪ್ಪಿಸಲು ಬಂದಿದ್ದನಂತೆ. ಅರಮನೆಗೆ ಬ್ರಾಹ್ಮಣ ತನ್ನ ಮಗಳೊಂದಿಗೆ ಬಂದಾಗ, ಆ ವೇಳೆ ರಾಜ ಹೊರಹೋಗಿದ್ದ. ಅರಮನೆಯ ಕರಣಿಕ ಸುಬ್ಬರಸಯ್ಯ ಎಂಬಾತ (ಈತನೂ ಬ್ರಾಹ್ಮಣ) ಆ ಯುವತಿ ರಾಜನಿಗೆ ಲಭಿಸದಂತೆ ತಪ್ಪಿಸಿದ ಆರೋಪವಿದೆ. ಅರಮನೆಯ ಗೂಢಚಾರರಿಂದ ವಿಷಯ ತಿಳಿದು ರಾಜನು ಸುಬ್ಬರಸಯ್ಯನನ್ನು ರಾಜದ್ರೋಹಕ್ಕಾಗಿ ಕ್ರೂರ ರೀತಿಯಲ್ಲಿ ಕೊಲ್ಲಿಸಿದ ಕತೆಯಿದೆ. ಈ ಸುಬ್ಬರಸಯ್ಯ ಬ್ರಹ್ಮ ರಾಕ್ಷಸನಾಗಿ ಕಾಡತೊಡಗಿದ್ದನಂತೆ. ಆ...