ಶ್ರೀ ಹುಲಿಗೆಮ್ಮ ದೇವಿಯವರ ಈ ದೇವಸ್ಥಾನವು ಶಕ್ತಿಯ ಪೀಠವಾಗಿದ್ದು, ಸುಮಾರು ಎಂಟು ನೂರು ವರ್ಷಗಳ ಇತಿಹಾಸವನ್ನು ಹೊಂದಿದೆ. ಇದೇ ಗ್ರಾಮದವರಾದ ಶ್ರೀ ನಾಗಜೋಗಿ ಮತ್ತು ಶ್ರೀ ಬಸವಜೋಗಿ ಇವರು ಇಲ್ಲಿಯ ಶಿವಾಲಯದ ಅರ್ಚಕರಾದ ಶ್ರೀ ಸೋಮನಾಥಭಟ್ಟರ ಶಿಷ್ಯರಾಗಿದ್ದು, ಶ್ರೀ ದೇವಿಯ ಭಾಗವತದ ಮಹಿಮೆಯನ್ನು ಈರ್ವರಿಗೂ ಉಪದೇಶಿಸುತ್ತಿದ್ದರು. ಜೋಗಿಯರೀರ್ವರು ಪ್ರತಿ ಹುಣ್ಣಿಮೆಯಂದು ಸವದತ್ತಿಯ ಶ್ರೀ ಎಲ್ಲಮ್ಮನ ಕ್ಷೇತ್ರಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದರು. ಮಳೆಗಾಲದ ಪೂರ್ಣಿಮೆಯ ಒಂದು ದಿನ ಶ್ರೀ ದೇವಿ ಎಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದಾಗ ಮಳೆಯಿಂದ ಪ್ರಯಾಣಕ್ಕೆ ಅಡಚಣೆಯಾಗಿ ತೊಂದರೆಗೊಳಗಾದರು. ಶ್ರೀ ದೇವಿ ಎಲ್ಲಮ್ಮನ ಸ್ಮರಣೆ ಮಾಡುತ್ತ ಇಡೀ ರಾತ್ರಿ ಮಳೆಯಲ್ಲಿ ಕಳೆಯುವಂತಾಯಿತು. ಉಷ:ಕಾಲದ ಸಮಯದಲ್ಲಿ ಶ್ರೀ ದೇವಿ ಎಲ್ಲಮ್ಮನೇ ಸ್ವಪ್ನದಲ್ಲಿ ಬಂದು “ಇನ್ನು ಮುಂದೆ ನೀವು ಕಷ್ಟಪಟ್ಟು ಇಲ್ಲಿಯವರೆಗೆ ಬರಬೇಕಾಗಿಲ್ಲ-ನಿಮ್ಮೂರಿನ ಶಿವದೇವಾಲಯದ ಪಶ್ಚಿಮದಲ್ಲಿ...