ದಿನಾಂಕ: 01-05-2003ರ ಪೂರ್ವದಲ್ಲಿ, ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಧಾರ್ಮಿಕ ಸಂಸ್ಥೆಗಳ ಆಡಳಿತ ನಿರ್ವಹಣೆಯನ್ನು 5 ವಿವಿಧ ಕಾಯ್ದೆಗಳ ಅನ್ವಯ ನಿರ್ವಹಿಸಲಾಗುತ್ತಿತ್ತು.
ಆಡಳಿತದಲ್ಲಿ ಏಕರೂಪತೆ ಹಾಗೂ ಸಮರ್ಪಕ ನಿರ್ವಹಣೆಯನ್ನು ತರುವ ಸಲುವಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ನ್ನು ಜಾರಿಗೆ ತರಲಾಗಿರುತ್ತದೆ. ತದನಂತರ ಮತ್ತಷ್ಟು ತಿದ್ದುಪಡಿ ಮಾಡಲು ಈ ಅಧಿನಿಯಮಕ್ಕೆ ದಿನಾಂಕ: 04-05-2011 ರಿಂದ ಜಾರಿಗೆ ಬರುವಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಅಧಿನಿಯಮ 2011 ಹಾಗೂ ದಿನಾಂಕ: 05-03-2012 ರಿಂದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (2ನೇ ತಿದ್ದುಪಡಿ) ಅಧಿನಿಯಮ 2012 ಹಾಗೂ ತತ್ಸಂಬಂಧ ನಿಯಮಾವಳಿಗಳು ದಿನಾಂಕ: 27-01-2012 ರಿಂದ ಜಾರಿಗೆ ಬಂದಿರುತ್ತದೆ.
ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಯಲ್ಲಿ 34563 ಅಧಿಸೂಚಿತ ಸಂಸ್ಥೆಗಳು, ಮೈಸೂರು ಮಹಾರಾಜ ಸಂಸ್ಕೃತ ಕಾಲೇಜು, ಆಗಮ ವಿಭಾಗ ಮತ್ತು ಮೇಲುಕೋಟೆ ಸರ್ಕಾರಿ ಸಂಸ್ಕ್ರತ ಕಾಲೇಜು ಹಾಗೂ ಆಂಧ್ರಪ್ರದೇಶದ ತಿರುಮಲ, ಮಂತ್ರಾಲಯ, ಶ್ರೀಶೈಲ, ಮಹಾರಾಷ್ಟ್ರದ ತುಳಜಾಪುರ ಮತ್ತು ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರಗಳು ಒಳಪಟ್ಟಿರುತ್ತವೆ.
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ಸಂಸ್ಥೆಗಳ ನಿರ್ವಹಣೆಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಹಾಗೂ ನಿಯಮಗಳು 2002 ರ ಅನ್ವಯ ನಿರ್ವಹಿಸಲಾಗುತ್ತಿದೆ.ಸದರಿ ಕಾಯ್ದೆಗೆ ಕರ್ನಾಟಕ ಅಧಿನಿಯಮ 12/2012 ರನ್ವಯ ತಿದ್ದುಪಡಿಯನ್ನು ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ:ಆರ್ ಡಿ/148/ಮುಸೇವಿ/2011, ದಿ:27-01-2012 ರ ಅನ್ವಯ ನಿಯಮಗಳಿಗೆ ತಿದ್ದುಪಡಿಯನ್ನು ತರಲಾಗಿದೆ.
ಪ್ರಸ್ತುತ ಮಾನ್ಯ ಉಚ್ಚನ್ಯಾಯಾಲಯದ ವಿಭಾಗೀಯ ಪೀಠವು ರಿಟ್ ಅರ್ಜಿ ಸಂಖ್ಯೆ:64805-64868/2011 ರಲ್ಲಿ ದಿ:17-11-2015 ರಂದು ನೀಡಿರುವ ತೀರ್ಪಿನನ್ವಯ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 2011ನ್ನು ರದ್ದಪಡಿಸಿರುತ್ತದೆ. ಸದರಿ ಆದೇಶದ ವಿರುದ್ದ ಸರ್ಕಾರವು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲ್ಮಾಡಿರುವ ಎಸ್.ಎಲ್.ಪಿ ಸಂಖ್ಯೆ: 6834-699/2016 ರಲ್ಲಿ ದಿ:18-04-2016 ರಲ್ಲಿ ತಡೆಯಾಜ್ಞೆ ನೀಡಿದ್ದು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011 ರ ಕಾಯ್ದೆಯು ಪುನ: ಜಾರಿಗೆ ಬಂದಿರುತ್ತದೆ. ಸದರಿ ಕಯ್ದೆ ಮತ್ತು ನಿಯಮಾವಳಿಗಳನ್ವಯ ಅಧಿಸೂಚಿತ ಸಂಸ್ಥೆಗಳ ಆಡಳಿತವನ್ನು ನಿರ್ವಹಿಸಲಾಗುತ್ತಿದೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಆರ್ ಡಿ/139/ಮುಸೇವಿ/2009, ದಿ:18-11-2010 ರಲ್ಲಿ ಕರ್ನಾಟಕ ಛತ್ರಗಳ (ಹೊರ ರಾಜ್ಯದಲ್ಲಿರುವ) ಆಡಳಿತ ನಿಯಮಾವಳಿ 2010 ಅನ್ನು ರೂಪಿಸಿದ್ದು, ಅದರಂತೆ ಹೊರ ರಾಜ್ಯಗಳಲ್ಲಿರುವ ಕರ್ನಾಟಕ ರಾಜ್ಯ ಛತ್ರಗಳ ಆಡಳಿತ ನಿರ್ವಹಿಸಲಾಗುತ್ತಿದೆ.